ಸೈನಾ-ಸಿಂಧು ವಿರುದ್ಧ ಆಡುವಾಗ ಪೂರ್ಣ ಸಾಮರ್ಥ್ಯವನ್ನು ಬಳಸಬೇಕಾಗಿದೆ: ಕರೋಲಿನಾ ಮರಿನ್

Update: 2020-07-17 04:38 GMT

ಹೊಸದಿಲ್ಲಿ: ‘‘ಭಾರತದ ಸೈನಾ ಮತ್ತು ಸಿಂಧು ಅದ್ಭುತ ಆಟಗಾರ್ತಿಯರು. ನಾನು ಅವರಿಬ್ಬರನ್ನೂ ತುಂಬಾ ಮೆಚ್ಚುತ್ತೇನೆ ಮತ್ತು ನಾನು ಅವರ ವಿರುದ್ಧ ಆಡುವಾಗ ಯಾವಾಗಲೂ ನನ್ನ ಪೂರ್ಣ ಶಕ್ತಿ, ಸಾಮರ್ಥ್ಯವನ್ನು ಬಳಸುತ್ತಿರುವುದಾಗಿ’’ ವಿಶ್ವದ ಮಾಜಿ ನಂ .1 ಶಟ್ಲರ್ ಕರೋಲಿನಾ ಮರಿನ್ ಬಹಿರಂಗಪಡಿಸಿದ್ದಾರೆ.

  ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಒಲಿಂಪಿಕ್ಸ್ ಚಿನ್ನದ ಬೇಟೆಗೆ ಸಜ್ಜಾಗುತ್ತಿರುವ ಸ್ಪೇನ್‌ನ ಮರಿನ್ ಅವರು ತಾನು ಭಾರತೀಯ ಆಟಗಾರರ ಬಗ್ಗೆ ಹೆಚ್ಚಿನ ಗೌರವ ಹೊಂದಿರುವುದಾಗಿ ಹೇಳಿದರು.

  ಸಿಂಧು ವಿರುದ್ಧ 8-6 ಮತ್ತು ಸೈನಾ ವಿರುದ್ಧ 7-6 ಹೆಡ್ -ಟು-ಹೆಡ್ ದಾಖಲೆ ಹೊಂದಿರುವ ಮರಿನ್ ತನ್ನ ಭಾರತೀಯ ಎದುರಾಳಿಗಳ ವಿರುದ್ಧ ಜಯ ದಾಖಲಿಸಲು ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಭಾರತದ ಇಬ್ಬರು ಆಟಗಾರ್ತಿಯರ ಪೈಕಿ ಯಾರನ್ನು ಸೋಲಿಸುವುದು ಕಷ್ಟ ಎಂಬ ಪ್ರಶ್ನೆ ಕೇಳಿದಾಗ ಮರಿನ್ ಅವರು ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ, ಇಬ್ಬರೂ ಉತ್ತಮ ಆಟಗಾರ್ತಿಯರು. ಯಾಕೆಂದರೆ ಭಾರತೀಯ ಬ್ಯಾಡ್ಮಿಂಟನ್ ವಿಶ್ವದ ಅಗ್ರಸ್ಥಾನದಲ್ಲಿದೆ. ನಾನು 2015ರಲ್ಲಿ ಸೈನಾ ವಿರುದ್ಧ ಕಠಿಣ ಫೈನಲ್ ಪಂದ್ಯಗಳನ್ನು ಆಡಿದ್ದೇನೆ. 2016 ಮತ್ತು 2018 ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸಿಂಧು ಅವರನ್ನು ಸೋಲಿಸಲು ಮರಿನ್ ಆಕ್ರಮಣಕಾರಿ ಪ್ರದರ್ಶನವನ್ನು ನೀಡಿದ್ದರು.

  ಮರಿನ್ ಮೂರು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲೂ ಚಿನ್ನ ಜಯಿಸಿದ್ದರು. ಮರಿನ್ ಈ ಹಿಂದೆ 2015ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೈನಾರನ್ನು ಸೋಲಿಸಿದ್ದರು. ಲಾಭದಾಯಕ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್)ನಲ್ಲಿ ಸ್ವಲ್ಪ ಸಮಯದವರೆಗೆ ಆಡಿದ ಬಳಿಕ 27 ವರ್ಷದ ಮರಿನ್ ಭಾರತದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದ್ದಾರೆ. ಮರಿನ್ ಹೈದರಾಬಾದ್ ಹಂಟರ್ಸ್‌ಗೆ 2018ರಲ್ಲಿ ಮೊದಲ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.2019ರಲ್ಲಿ ಪುಣೆ 7 ಏಸಸ್ ಪರ ಅವರು ಆಡಿದ್ದರು.

   ಭಾರತ ಬ್ಯಾಡ್ಮಿಂಟನ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಿರವಾದ ಶಕ್ತಿಯಾಗಿ ಮಾರ್ಪಟ್ಟಿದೆ . ಭಾರತದ ಪ್ರಮುಖ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ಅವರ ಯಶಸ್ಸು ಜಾಗತಿ ಕವಾಗಿ ಗಮನ ಸೆಳೆದಿದೆ. ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಕೀರ್ತಿಪತಾಕೆಯನ್ನು ಅವರು ಹಾರಿಸಿದ್ದಾರೆ.

 ಸೈನಾ ಮತ್ತು ಸಿಂಧು ವಿರುದ್ಧ ಅನೇಕ ಕಠಿಣ ಪಂದ್ಯಗಳನ್ನು ಆಡಿದ ಒಲಿಂಪಿಕ್ಸ್ ಚಾಂಪಿಯನ್ ಮತ್ತು ಮೂರು ಬಾರಿ ವಿಶ್ವ ಚಾಂಪಿಯನ್ ಕರೋಲಿನಾ ಮರಿನ್ ಅವರು ಭಾರತದ ಆಟಗಾರ್ತಿಯರ ವಿರುದ್ಧ ಆಡುವಾಗಲೆಲ್ಲಾ ತನ್ನನ್ನು ತಾನು ಮಿತಿಗೆ ತಳ್ಳಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಮರಿನ್ ಪ್ರತಿವರ್ಷ ಲೀಗ್‌ನಲ್ಲಿ ಆಡಲು ಭಾರತಕ್ಕೆ ಬರುತ್ತಾರೆ. ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಸಿಂಧು ಅವರನ್ನು ಸೋಲಿಸುವ ಮೂಲಕ ಭಾರತಕ್ಕೆ ಚಿನ್ನ ನಿರಾಕರಿಸಿದ್ದರೂ, ತಮ್ಮ ಭಾರತೀಯ ಅಭಿಮಾನಿಗಳಿಂದ ಪಡೆದ ಪ್ರಶಂಸೆಯು ಅವರಿಗೆ ಆಶ್ಚರ್ಯವನ್ನುಂಟು ಮಾಡಿತು.

 ಸಿಂಧು ವಿರುದ್ಧ 2016ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ನಂತರ ಭಾರತೀಯ ಅಭಿಮಾನಿಗಳೆಲ್ಲರೂ ನನ್ನ ಬಗ್ಗೆ ಎಷ್ಟು ಆಕರ್ಷಕವಾಗಿದ್ದಾರೆಂದು ನನಗೆ ನಂಬಲಾಗಲಿಲ್ಲ, ಏಕೆಂದರೆ ಅವರು ನನ್ನ ಬಗ್ಗೆ ಕೋಪಗೊಂಡಿದ್ದಾರೆಂದು ನಾನು ಭಾವಿಸಿದ್ದೆ ಎಂದು ಹೇಳಿದ್ದಾರೆ.

ನಾಲ್ಕು ಬಾರಿ ಯುರೋಪಿಯನ್ ಚಾಂಪಿಯನ್ ಮರಿನ್ ಅವರು ಭಾರತದಲ್ಲಿ ಆಡುವಾಗ ತನ್ನ ತವರಿನಲ್ಲಿ ಆಡುವ ಅನುಭವವಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News