ಕೊರೋನ ಸಮಯದಲ್ಲಿ ರಾಜಕೀಯ ಪಕ್ಷಗಳ ಕೊಳಕು ರಾಜಕೀಯ:ಎಎಪಿ ಆಕ್ರೋಶ
ಹೊಸದಿಲ್ಲಿ, ಜು.17: ರಾಜಸ್ಥಾನದಲ್ಲಿನ ರಾಜಕೀಯ ಬೆಳವಣಿಗೆಯನ್ನ್ನು ಉಲ್ಲೇಖಿಸಿರುವ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಪಕ್ಷ ವೆಂಟಿಲೇಟರ್‌ನಲ್ಲಿದೆ. ಇದನ್ನು ಪ್ಲಾಸ್ಮಾ, ರೆಮ್‌ಡಿಸಿವಿರ್ ಔಷಧಿಯಿಂದಲೂ ಬದುಕಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವತ್ತ ಗಮನ ನೀಡಬೇಕಾದ ಸಮಯದಲ್ಲಿ ರಾಜಕೀಯ ಪಕ್ಷಗಳು ಕೊಳಕು ರಾಜಕೀಯವನ್ನು ಆಡುತ್ತಿವೆ ಎಂದು ಆರೋಪಿಸಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಎಎಪಿ ವಕ್ತಾರ ರಾಘವ್ ಚಧಾ, ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಈ ದೇಶಕ್ಕೆ ಭವಿಷ್ಯವನ್ನು ತಂದುಕೊಡಲಾರದು. ಈ ಪಕ್ಷ ಎದ್ದೇಳಬೇಕಾದರೆ ಹೊಸ ರಕ್ತ ಹಾಗೂ ಶಕ್ತಿಯ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಮೂಲಕ ದಿಲ್ಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿಯ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಏನೇ ಆಗಲಿ, ನೀವು ಕೇಜ್ರಿವಾಲ್‌ಗೆ ಮತ ಹಾಕಿದರೆ, ನೀವು ದಿಲ್ಲಿಯಲ್ಲಿ ಅಮಿತ್ ಶಾ(ಬಿಜೆಪಿ ನಾಯಕ, ಗೃಹಸಚಿವ) ಅವರ ಆಡಳಿತವನ್ನು ಪಡೆಯಬಹುದು. ಕಾಂಗ್ರೆಸ್ ಇಂತಹ ದ್ವಿಪಾತ್ರದ ಆಫರ್ ನೀಡಲಾರದು ಎಂದು ಚೌಧರಿ ಟ್ವೀಟ್ ಮಾಡಿದ್ದರು.
ಕೋವಿಡ್-19 ವಿರುದ್ಧ ಹೋರಾಡಬೇಕಾದ ಇಂತಹ ಸಂದರ್ಭದಲ್ಲಿರಾಜಕೀಯ ಪಕ್ಷಗಳು ಕೊಳಕು ರಾಜಕೀಯದಲ್ಲಿ ವ್ಯಸ್ತವಾಗಿವೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ದೇಶ ಎಲ್ಲ ರಾಜಕೀಯ ಪಕ್ಷಗಳಿಂದ ಸಹಕಾರವನ್ನು ನಿರೀಕ್ಷಿಸುತ್ತದೆ.ಒಂದು ಪಕ್ಷ ತನ್ನ ಶಾಸಕರನ್ನು ಮಾರಾಟ ಮಾಡಲು ತಲ್ಲೀನವಾಗಿದ್ದರೆ,ಮತ್ತೊಂದು ಪಕ್ಷ ಶಾಸಕರುಗಳನ್ನು ಖರೀದಿಸುವುದರಲ್ಲಿ ಮಗ್ನವಾಗಿದೆ ಎಂದು ರಾಜಸ್ಥಾನದ ರಾಜಕೀಯ ಬೆಳವಣಿಗೆಯನ್ನು ಉಲ್ಲೇಖಿಸಿ ರಾಘವ್ ಹೇಳಿದ್ದಾರೆ.
ರಾಜಸ್ಥಾನದ ರಾಜಕೀಯ ನಾಟಕವನ್ನು ಇಡೀ ದೇಶ ನೋಡುತ್ತಿದೆ. ನಮ್ಮ ದೇಶದ ಜನತೆ ಈ ರೀತಿಯ ಕೊಳಕುರಾಜಕೀಯವನ್ನು ನೋಡಿ ಬೇಸರಗೊಂಡಿದ್ದಾರೆ. ನಮ್ಮ ತಲೆಮೇಲೆ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿರುವಾಗ ರಾಜಕೀಯ ಪಕ್ಷಗಳು ಕೊಳಕು ರಾಜಕೀಯದಲ್ಲಿ ತೊಡಗಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ ಎಂದು ವರದಿಗಾರರಿಗೆ ತಿಳಿಸಿದರು.