×
Ad

ದ.ಕ. ಜಿಲ್ಲೆಯಲ್ಲಿ ಲಾಕ್‌ಡೌನ್ 2ನೇ ದಿನ: ವಾಹನ ಸಂಚಾರ ನಿರಾತಂಕ

Update: 2020-07-17 11:53 IST

ಮಂಗಳೂರು, ಜು.16: ಕೊರೋನ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣದ ಭಾಗವಾಗಿ ದ.ಕ. ಜಿಲ್ಲಾಡಳಿತ ಲಾಕ್‌ಡೌನ್ ವಿಧಿಸಿದೆ. ಹಾಗಿದ್ದರೂ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ವಾಹನ ಸಂಚಾರ ನಿರಾತಂಕವಾಗಿದೆ.

ಖಾಸಗಿ ವಾಹನಗಳು ಬೀದಿಗಿಳಿಯದಂತೆ ಎಚ್ಚರಿಕೆ, ಮನವಿಯನ್ನು ಜಿಲ್ಲಾಡಳಿತ ಮಾಡಿದೆ. ಆದರೆ, ದ್ವಿಚಕ್ರ, ಆಟೋ ರಿಕ್ಷಾ, ಕಾರು, ಜೀಪ್ ಸೇರಿದಂತೆ ಖಾಸಗಿ ವಾಹನಗಳು ಬೆಳಗ್ಗಿನ ಹೊತ್ತು ನಿರಾತಂಕವಾಗಿ ಸಂಚರಿಸಿದವು.

ಬೆಳಗ್ಗೆ 8ರಿಂದ 11 ಗಂಟೆಯವರೆಗೆ ತರಕಾರಿ, ಹಣ್ಣುಹಂಪಲು, ದಿನಸಿ, ಮಾಂಸ ಖರೀದಿಗೆ ಅವಕಾಶ ನೀಡಲಾಗಿದ್ದರೂ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೂ ರಸ್ತೆಯುದ್ದಕ್ಕೂ ವಾಹನಗಳು ಮಾತ್ರ ಸಂಚರಿಸುತ್ತಿರುವುದು ಕಂಡುಬಂತು.

ನಗರ ಒಳಭಾಗದ ದಿನಸಿ ಹಾಗೂ ತರಕಾರಿ ಅಂಗಡಿಗಳು ತೆರೆದಿದ್ದು, ನಗರದ ಪ್ರಮುಖ ಭಾಗಗಳಲ್ಲೂ ಕೆಲವೊಂದು ದಿನಸಿ ಹಾಗೂ ತರಕಾರಿ, ಹಣ್ಣು ಹಂಪಲು, ಹೂವು, ಮಾಂಸದ ಅಂಗಡಿ 11 ಗಂಟೆಯ ವರೆಗೆ ತೆರೆದಿದ್ದವು. 11 ಗಂಟೆಯಾಗುತ್ತಿದ್ದಂತೆಯೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಲಾರಂಭಿಸಿದ್ದಾರೆ.

ಈ ನಡುವೆ, ವ್ಯಾಪಾರಕ್ಕೆಂದು ನಗರಕ್ಕೆ ಬಂದವರು ಕೂಡಾ 11 ಗಂಟೆಯ ವೇಳೆಗೆ ತಮ್ಮ ವ್ಯವಹಾರವನ್ನು ಬಂದ್ ಮಾಡಿ ಮನೆಗೆ ಹಿಂದಿರುಗಿದರು.

ಬ್ಯಾಂಕ್‌ಗಳು, ಅಂಚೆ ಕಚೇರಿಗಳು, ಮನಪಾ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ. ತುರ್ತು ಸೇವೆಗಳ ಸಿಬ್ಬಂದಿ ಕೂಡಾ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಮನೆ, ಕಚೇರಿಗಳಿಗೆ ಅಂಚೆಗಳನ್ನು ತಲುಪಿಸುವ ಅಂಚೆಯವರು, ಪೌರ ಕಾರ್ಮಿಕರು, ತ್ಯಾಜ್ಯ ನಿರ್ವಹಣಾ ಸಿಬ್ಬಂದಿ ಕೂಡಾ ಮಳೆಯ ನಡುವೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News