ರಾಜಸ್ಥಾನ ಕಾಂಗ್ರೆಸ್ ಸರಕಾರದ ವಿರುದ್ಧ ಪಿತೂರಿ ಆರೋಪ: ಕೇಂದ್ರ ಸಚಿವರ ವಿರುದ್ಧ ಎಫ್‌ಐಆರ್
ಜೈಪುರ, ಜು.17: ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಪಿತೂರಿ ನಡೆಸಿರುವ ಆರೋಪದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹಾಗೂ ಬಂಡಾಯ ಎದ್ದಿರುವ ಕಾಂಗ್ರೆಸ್ ಶಾಸಕ ಭನ್ವರ್‌ಲಾಲ್ ಶರ್ಮಾ ಹೆಸರು ದಾಖಲಾಗಿದೆ.
ಅಶೋಕ್ ಗೆಹ್ಲೋಟ್ ಸರಕಾರದ ವಿರುದ್ಧ ಕಾಂಗ್ರೆಸ್‌ನ ಬಂಡಾಯ ಶಾಸಕರು ಬಿಜೆಪಿಯೊಂದಿಗೆ ಸೇರಿ ಸಂಚು ನಡೆಸಿದ್ದಾರೆ ಎಂದು ತನಿಖೆಯ ಮೂಲಕ ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಇಂದು ಆರೋಪಿಸಿದೆ. ಕಾಂಗ್ರೆಸ್‌ನ ಭನ್ವರ್‌ಲಾಲ್ ಶರ್ಮಾ ಹಾಗೂ ಇನ್ನೋರ್ವ ಬಂಡಾಯ ಶಾಸಕ ವಿಶ್ವೇಂದ್ರ ಸಿಂಗ್‌ರನ್ನು ಅಮಾನತುಗೊಳಿಸಲಾಗಿದ್ದು, ಕಾಂಗ್ರೆಸ್ ಸರಕಾರವನ್ನು ಉರುಳಿಸಲು ನಡೆಸಿರುವ ಡೀಲ್‌ನಲ್ಲಿ ಈ ಇಬ್ಬರು ಶಾಸಕರು ಭಾಗಿಯಾಗಿರುವುದಕ್ಕೆ ಆಡಿಯೋ ಸಾಕ್ಷವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎರಡು ಆಡಿಯೋ ರೆಕಾರ್ಡಿಂಗ್‌ಗಳು ಹೊರ ಬಂದಿದ್ದು, ಇದರಲ್ಲಿ ಭನ್ವರ್‌ಲಾಲ್ ಶರ್ಮಾ ಅವರು ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಒಂದು ಆಡಿಯೊದ ಧ್ವನಿಯು ರಾಜಸ್ಥಾನ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಜಲಶಕ್ತಿ ಸಚಿವ ಶೆಖಾವತ್ ಅವರದ್ದಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಆಡಿಯೋ ಟೇಪ್ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಆದರೆ, ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ಆಡಿಯೊವನ್ನು ಪ್ಲೇ ಮಾಡಿಲ್ಲ.
"ನಿನ್ನೆ ಆಘಾತಕಾರಿ ಟೇಪ್‌ಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಇದರಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ಬಿಜೆಪಿ ನಾಯಕ ಸಂಜಯ ಜೈನ್ ಹಾಗೂ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಅವರು ಶಾಸಕರಿಗೆ ಲಂಚ ನೀಡುವ ಹಾಗೂ ರಾಜಸ್ಥಾನ ಸರಕಾರವನ್ನು ಉರುಳಿಸುವ ಬಗ್ಗೆ ಮಾತನಾಡಿದ್ದಾರೆ. ಭನ್ವಾರ್ ಲಾಲ್ ಹಾಗೂ ವಿಶ್ವೇಂದ್ರ ಸಿಂಗ್‌ರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ವತ್ವದಿಂದ ಅಮಾನತು ಮಾಡಿದೆ. ಅವರಿಗೆ ಶೋಕಾಸ್ ನೋಟಿಸ್‌ನ್ನು ನೀಡಿದೆ'' ಎಂದು ಸುದ್ದಿಗೋಷ್ಟಿಯಲ್ಲಿ ಸುರ್ಜೆವಾಲಾ ಹೇಳಿದ್ದಾರೆ.