'ಅಮಿತ್ ಶಾ, ಆದಿತ್ಯನಾಥ್ ಸಹಿತ ಬಿಜೆಪಿ ನಾಯಕರ ಪ್ರಚೋದನಾತ್ಮಕ ಭಾಷಣಗಳೇ ದಿಲ್ಲಿ ಹಿಂಸಾಚಾರಕ್ಕೆ ಕಾರಣ'

Update: 2020-07-17 07:42 GMT

ಹೊಸದಿಲ್ಲಿ : ಫೆಬ್ರವರಿಯಲ್ಲಿ ರಾಜಧಾನಿ ದಿಲ್ಲಿಯಲ್ಲಿ ಹಿಂಸಾಚಾರ ನಡೆಯುವುದಕ್ಕೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹಾಗೂ ಇತರ ಬಿಜೆಪಿ ರಾಜಕಾರಣಿಗಳು ತಮ್ಮ ಪ್ರಚೋದನಾತ್ಮಕ ಭಾಷಣಗಳ ಮೂಲಕ ಕೋಮು ಭಾವನೆಗಳನ್ನು ಕೆರಳಿಸಿದ್ದರು ಎಂದು ದಿಲ್ಲಿ ಅಲ್ಪಸಂಖ್ಯಾತರ ಆಯೋಗ ಆರೋಪಿಸಿದೆ ಎಂದು telegraphindia.com  ವರದಿ ಮಾಡಿದೆ.

 ಹಿಂಸಾಚಾರದ ಸಂದರ್ಭ ಪೊಲೀಸರು ಹಿಂಸಾಕೋರರ ಜತೆ ಶಾಮೀಲಾಗಿದ್ದರು ಹಾಗೂ ದಾಳಿಗಳಿಗೆ  ಕುಮ್ಮಕ್ಕು ನೀಡಿದ್ದರು ಎಂಬ ಗಂಭೀರ ಆಪಾದನೆಯನ್ನೂ ಆಯೋಗ ಮಾಡಿದೆ. ದಿಲ್ಲಿ ಅಲ್ಪಸಂಖ್ಯಾತ ಆಯೋಗದ  ಸತ್ಯ ಶೋಧನಾ ವರದಿಯಲ್ಲಿ ಈ ಆರೋಪಗಳು ಉಲ್ಲೇಖಗೊಂಡಿವೆ. ಸುಪ್ರೀಂ ಕೋರ್ಟ್ ವಕೀಲ ಎಂ ಆರ್ ಶಂಶದ್ ಅವರ ನೇತೃತ್ವದ ಈ ಸತ್ಯಶೋಧನಾ ಸಮಿತಿ ತನ್ನ ವರದಿಯನ್ನು ದಿಲ್ಲಿ ಸಚಿವ ಸಂಪುಟ, ಸ್ಪೀಕರ್ ಹಾಗೂ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಜುಲೈ 13ರಂದು ಸಲ್ಲಿಸಿತ್ತು.

“ದಿಲ್ಲಿ ವಿಧಾನಸಭಾ ಚುನಾವಣೆಗಳು 2020: ಪ್ರಚೋದನಾತ್ಮಕ ಪ್ರಚಾರ ಭಾಷಣಗಳು ಹಾಗೂ ದಿಲ್ಲಿಯಲ್ಲಿ ಕೋಮು ಭಾವನೆಗಳ ಕೆರಳಿಕೆ,'' ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ ಅಮಿತ್ ಶಾ, ಆದಿತ್ಯನಾಥ್, ಕಪಿಲ್ ಮಿಶ್ರಾ, ಕೇಂದ್ರ ಸಚಿವರುಗಳಾದ ಅನುರಾಗ್ ಠಾಕುರ್, ಗಿರಿರಾಜ್ ಸಿಂಗ್, ಸಂಸದರಾದ ಪರ್ವೇಶ್ ವರ್ಮ ಹಾಗೂ ತೇಜಸ್ವಿ ಸೂರ್ಯ ಮತ್ತಿತರರು ಮಾಡಿದ ಭಾಷಣೆಗಳ ಉಲ್ಲೇಖವಿದೆ.

“ಸಿಎಎ ವಿರೋಧಿ ಹೋರಾಟಗಾರರನ್ನು ಬಹಿರಂಗವಾಗಿ ಅವಹೇಳನಗೈದು ಹಾಗೂ ಅವರ ಉದ್ದೇಶಗಳನ್ನು ಪ್ರಶ್ನಿಸಿ  ಕೋಮು ಭಾವನೆಗಳನ್ನು ಕೆರಳಿಸುವಂತಹ ಹಾಗೂ ಬಹಿರಂಗವಾಗಿ ಹಿಂಸೆಯ ಬೆದರಿಕೆಯೊಡ್ಡುವಂತಹ ಬಿಜೆಪಿ ನಾಯಕರ ಭಾಷಣಗಳ ನಂತರವೇ ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ  ನಡೆದಿದೆ ಹಾಗೂ ಶಾಹೀನ್ ಬಾಗ್ ಪ್ರತಿಭಟನೆಗಳನ್ನು ತಪ್ಪಾಗಿ ಬಿಂಬಿಸುವ ಯತ್ನಗಳೂ ಈ ಭಾಷಣಗಳಲ್ಲಿ ನಡೆದಿತ್ತು'' ಎಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News