ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನ ಪಾಸಿಟಿವ್
ಬೆಳ್ತಂಗಡಿ, ಜು.17: ತಾಲೂಕಿನಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ತಾಲೂಕಿನ ಸರಕಾರಿ ಆಸ್ಪತ್ರೆಯೇ ಕೋವಿಡ್ ಹರಡುವ ಕೇಂದ್ರವಾಗಿ ಮಾರ್ಪಟ್ಟಿದೆ. ಆಸ್ಪತ್ರಯ ಮೂವರು ನರ್ಸ್ ಗಳಿಗೆ ಚಾಲಕನಿಗೆ ಹಾಗೂ ಪ್ರಯೋಗಾಲಯದ ಸಿಬ್ಬಂದಿಗೆ ಸೋಂಕು ತಗಲಿತ್ತು. ಇದೀಗ ವೈದ್ಯರೊಬ್ಬರಿಗೂ ಕೊರೋನ ಸೋಂಕು ದೃಢಪಟ್ಟಿದೆ. ಆಸ್ಪತ್ರಗೆ ಹೆರಿಗೆಗೆಂದು ದಾಖಲಾಗಿದ್ದ ಇಬ್ಬರು ಮಹಿಳೆಯರಿಗೂ ಕೊರೋನ ದೃಢಪಟ್ಟಿದೆ.
ಯಾವುದೇ ಸಮರ್ಪಕವಾದ ಸಿದ್ದತೆಗಳಿಲ್ಲದೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಘೋಷಿಸಿರುವುದೇ ಈ ರೀತಿಯಾಗಿ ಕೋವಿಡ್ ಹರಡಲು ಕಾರಣವಾಗಿದೆ ಎಂಬ ದೂರೂ ಕೇಳಿಬರುತ್ತಿದೆ.
ನಿನ್ನೆ ಇಬ್ಬರು ಬಾಣಂತಿಯರಿಗೆ ಕೊರೋನ ದೃಢಪಟ್ಟ ಬೆನ್ನಲ್ಲಿಯೇ ಒಂದು ಮನೆಯವರು ಆಸ್ಪತ್ರೆಗೆ ಬಂದು ವೈಧ್ಯಾಧಿಕಾರಿಗಳ ಆದೇಶಗಳನ್ನೂ ಪಾಲಿಸದೆ ಬಲವಂತವಾಗಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಯಿಂದ ಕರೆದೊಯ್ದಿದ್ದರು. ಬಳಿಕ ಬೆಳ್ತಂಗಡಿ ಪೋಲೀಸರು ಮನೆಗೆ ತೆರಳಿ ಅವರನ್ನು ಮತ್ತೆ ಆಸ್ಪತ್ರಗೆ ದಾಖಲಿಸುವಂತೆ ಮಾಡಿದ್ದರು. ಇದೀಗ ಇಬ್ಬರು ಮಹಿಳೆಯರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಆಸ್ಪತ್ರೆಯ ಕೆಲ ವಿಭಾಗಗಳನ್ನು ಮುಚ್ಚಲಾಗಿದೆ. ತಾಲೂಕಿನ ಬಹುತೇಕ ಬಡವರು ಚಿಕಿತ್ಸೆಗಾಗಿ ಈ ಅಸ್ಪತ್ರೆಯನ್ನೇ ಅವಲಂಬಿಸಿದ್ದರು. ಸದ್ಯ ಇಲ್ಲಿಗೆ ಬರಲು ಜನರು ಭಯ ಪಡುವಂತಾಗಿದೆ. ತಾಲೂಕಿನಲ್ಲಿ ಕೊರೋನ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ತಾಲೂಕು ಆಸ್ಪತ್ರೆಯಲ್ಲಿ ಇತರರು ಚಿಕಿತ್ಸೆ ಪಡೆಯಲು ಅವಕಾಶ ಒದಗಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಬೆಳ್ತಂಗಡಿ ಆಸ್ಪತ್ರೆಯ 10 ಬೆಡ್ ಗಳನ್ನು ಕೊರೋನ ಚಿಕಿತ್ಸೆಗೆ ಮೀಸಲಿಟ್ಟಿದ್ದು ಆರು ಮಂದಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೂ ಕೊರೋನ ತಗುಲಿದ್ದು ಎಲ್ಲರಲ್ಲೂ ಭಯ ಮೂಡಿಸಿದೆ.