ಎಸ್‌ಇಝೆಡ್ ಅಧೀನದ ಮೀನು ಸಂಸ್ಕರಣಾ ಘಟಕವೊಂದರಲ್ಲಿ ಜೀತಗಾರಿಕೆ: ಡಿವೈಎಫ್‌ಐ ಆರೋಪ
ಮಂಗಳೂರು, ಜು.17: ಎಸ್‌ಇಝೆಡ್ ಅಧೀನದ ಮೀನು ಸಂಸ್ಕರಣಾ ಘಟಕವೊಂದರಲ್ಲಿರುವ ಕಾರ್ಮಿಕರಿಗೆ ಸರಿಯಾಗಿ ಸಂಬಳ, ವಸತಿ, ಆಹಾರ ವ್ಯವಸ್ಥೆ ಕಲ್ಪಿಸದೆ ನೀಡದೆ ಜೀತಗಾರಿಕೆ ಮಾಡಲಾಗುತ್ತಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಇಲ್ಲಿನ ಖಾಸಗಿ ಕಂಪೆನಿಯಲ್ಲಿ ಮುನ್ನೂರಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಆ ಪೈಕಿ ಅಸ್ಸಾಂ ರಾಜ್ಯದ ಅಧಿಕ ಮಂದಿ ಇದ್ದಾರೆ. ಜೋಕಟ್ಟೆಯ ಸಣ್ಣ ಕೊಠಡಿಗಳಲ್ಲಿ ಮಹಿಳೆಯರ ಸಹಿತ 16 ಮಂದಿ ನೆಲೆಸಿದ್ದಾರೆ. ಈ ಕಾರ್ಮಿಕರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಆಹಾರವನ್ನೂ ನೀಡುತ್ತಿಲ್ಲ. ಕೆಲವು ದಿನಗಳ ಹಿಂದೆ ಇವರು ಹಸಿವಿನಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅದರಂತೆ ವಿವರ ಕಲೆ ಹಾಕಿದಾಗ ಆಘಾತಕಾರಿ ಸಂಗತಿಗಳು ಹೊರಗೆ ಬಂದಿವೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಸ್ಸಾಂ ಮೂಲದ ಈ ಕಾರ್ಮಿಕರನ್ನು ಉತ್ತರ ಭಾರತ ಮೂಲದ ಗುತ್ತಿಗೆದಾರ ದಂಪತಿಯ ಮೂಲಕ ಇಲ್ಲಿ ಕೆಲಸಕ್ಕೆ ನಿಯುಕ್ತಿಗೊಳಿಸಲಾಗಿದೆ. ಇವರು ದಿನಕ್ಕೆ 12 ಗಂಟೆ ದುಡಿಯಬೇಕು. ಮಾಸಿಕ 7,500 ರೂ. ಸಂಬಳ ನಿಗದಿಪಡಿಸಲಾಗಿದೆ. ಅವಧಿ ಮೀರಿ ಕೆಲಸ ಮಾಡಿದರೆ ಹೆಚ್ಚುವರಿ ಸಂಬಳವಿಲ್ಲ, ಪಿಎಫ್, ಇಎಸ್‌ಐ ಕೂಡ ಇಲ್ಲ. ಹಾಜರಾತಿ ಎಂಬುದು ಇಲ್ಲವೇ ಇಲ್ಲ. ಹಾಗಾಗಿ ಇವರು ಈ ಕಂಪೆನಿಯಲ್ಲಿ ಕೆಲಸ ಮಾಡಿದ್ದಕ್ಕೆ ದಾಖಲೆಯೇ ಇಲ್ಲ. ಅಕಸ್ಮಾತ್ ಒಂದು ದಿನ ರಜೆ ಮಾಡಿದರೆ, ಸಂಬಳದಲ್ಲಿ 300 ರೂ. ಕಡಿತಗೊಳಿಸಲಾಗುತ್ತದೆ. ಉಳಿದುಕೊಳ್ಳುವ ಸ್ಥಳದಿಂದ ಕೆಲಸ ಮಾಡುವ ಸ್ಥಳಕ್ಕೆ ಗುತ್ತಿಗೆದಾರನೇ ಸಾಗಿಸುತ್ತಾನೆ. ಹೊರಗಿನ ಜನರ ಸಂಪರ್ಕ ಇಲ್ಲದಂತೆ ವಸ್ತುಶಃ ಜೀತದಾಳುಗಳಂತೆ ಇವರನ್ನು ಕಾಣಲಾಗುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಮೊದಲು ಕೆಲವು ದಿನ ಕೆಲಸವಿರಲಿಲ್ಲ. ಬಳಿಕ ಕೆಲಸ ನೀಡಲಾಗಿದೆ. ಕಳೆದ ಮೂರು ತಿಂಗಳಿನಿಂದ ಸಂಬಳವನ್ನೂ ಕೊಟ್ಟಿಲ್ಲ. ಸಂಬಳ ಕೇಳಿದರೆ ಗುತ್ತಿಗೆದಾರ ಬೆದರಿಸುತ್ತಾನೆ. ಸಂಬಳ ಕೊಡದ ಕಾರಣ ಇವರು ಇದೀಗ ಕೆಲಸಕ್ಕೆ ಹೋಗುತ್ತಿಲ್ಲ. ಹಾಗಾಗಿ ಮಕ್ಕಳ ಸಹಿತ ಎಲ್ಲರೂ ಹಸಿವಿನಿಂದ ಕಂಗೆಟ್ಟಿದ್ದಾರೆ. ತಕ್ಷಣ ಡಿವೈಎಫ್‌ಐ ಕಾರ್ಯಕರ್ತರಾದ ಅಬೂಬಕ್ಕರ್ ಬಾವ, ರಾಜು, ಇಕ್ಬಾಲ್ ಮತ್ತಿತರರು ಇವರಿಗೆ ಆಹಾರದ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೆ ಗುತ್ತಿಗೆದಾರನ ಜೊತೆ ಮಾತನಾಡಿದ್ದಾರೆ. ಆದರೆ, ಪ್ರಯೋಜನವಾಗಲಿಲ್ಲ. ಹಾಗಾಗಿ ಎಸ್‌ಇಝೆಡ್ ಮತ್ತು ಇವರನ್ನು ಜೀತದಾಳುಗಳಂತೆ ದುಡಿಸುವ ಕಂಪೆನಿ ನ್ಯಾಯ ದೊರಕಿಸಿಕೊಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.