‘ಮಾದಕದ್ರವ್ಯ ಜಾಲದ ಮುಖ್ಯಸ್ಥನ ಬಿಡುಗಡೆಗೆ ಮಣಿಪುರ ಸಿಎಂ, ಬಿಜೆಪಿ ಉಪಾಧ್ಯಕ್ಷರಿಂದ ಒತ್ತಡ’

Update: 2020-07-17 12:35 GMT

ಇಂಫಾಲ್: ಬಂಧಿತ ಡ್ರಗ್ಸ್ ದೊರೆ ಲ್ಹುಖೊಸೇಯ್ ಝೌ ಎಂಬಾತನನ್ನು ಬಿಡುಗಡೆಗೊಳಿಸುವಂತೆ ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಹಾಗೂ ಕೆಲ ಉನ್ನತ ಪೊಲೀಸ್ ಅಧಿಕಾರಿಗಳು ತನ್ನ ಮೇಲೆ ಒತ್ತಡ ಹೇರಿದ್ದಾರೆಂದು ಐಪಿಎಸ್ ಅಧಿಕಾರಿ ತೌನೌಜಮ್ ಬೃಂದಾ ಅವರು ಗುವಹಾತಿ ಹೈಕೋರ್ಟಿಗೆ ಸಲ್ಲಿಸಿರುವ ಅಫಿದಾವಿತ್ ನಲ್ಲಿ ಹೇಳಿದ್ದಾರೆ.

ಝೌಗೆ ಜಾಮೀನು ಲಭಿಸಿದ ನಂತರ ಫೇಸ್ ಬುಕ್‍ ನಲ್ಲಿ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪ ಹೊತ್ತು ಬೃಂದಾ ಅವರು  ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದಾರೆ. ಝೌ ಬಂಧನಕ್ಕೀಡಾದ ಸಂದರ್ಭ ಚಂದೇಲ್‍ ನ ಅಟೊನೊಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್‍ ನ ಅಧ್ಯಕ್ಷನಾಗಿದ್ದ.

ಝೌ ಹಾಗೂ ಆತನ ಏಳು ಮಂದಿ ಸಹವರ್ತಿಗಳನ್ನು ಜೂನ್ 18ರ ರಾತ್ರಿ  ತನ್ನ ನೇತೃತ್ವದಲ್ಲಿ ನಾರ್ಕೋಟಿಕ್ಸ್ ಇಲಾಖೆಯ  ಅಧಿಕಾರಿಗಳು ಬಂಧಿಸಿ ಡ್ರಗ್ಸ್, ನಗದು, ಹಳೆ ಕರೆನ್ಸಿ ನೋಟುಗಳ ಸಹಿತ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಆತನನ್ನು ಬಂಧಿಸಿದ ಬೆನ್ನಲ್ಲೇ ತನಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಿಂದ ಕರೆ ಬಂದು ಅವರ ಮುಖಾಂತರ ಸಿಎಂ ಜತೆ ಮಾತನಾಡುವಂತೆ ಮಾಡಲಾಯಿತು ಎಂದು ಆಕೆ ತನ್ನ ಅಫಿದಾವಿತ್ ನಲ್ಲಿ ಆರೋಪಿಸಿದ್ದಾರೆ.

ಆಗ ಸಿಎಂ ತನ್ನನ್ನು ಶ್ಲಾಘಿಸಿ ಎಡಿಸಿ ಸದಸ್ಯನ ಮನೆಯಲ್ಲಿ ಡ್ರಗ್ಸ್ ಪತ್ತೆಯಾದರೆ ಬಂಧಿಸಬೇಕು ಎಂದಿದ್ದರು. ಈತನ್ಮಧ್ಯೆ ಝೌ ಹಲವು ಬಾರಿ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದ್ದರೂ ತಾನು ನಿರಾಕರಿಸಿದ್ದಾಗಿ ಹಾಗೂ ತನಗೆ ಈ ಹಿಂದೆ ಕರೆ ಮಾಡಿದ್ದ  ಬಿಜೆಪಿ ನಾಯಕ ಮೊಯಿರಂಗ್ತೆಮ್ ಅಸ್ನಿಕುಮಾರ್ ತನ್ನ ನಿವಾಸಕ್ಕೆ ಬಂದು ಝೌ ಚಂದೇಲ್‍ನಲ್ಲಿ ಮುಖ್ಯಮಂತ್ರಿಯ ಪತ್ನಿಯ ಬಲಗೈ ಬಂಟನಾಗಿದ್ದಾನೆಂದು ತಿಳಿಸಿದ್ದರು. ನಂತರ ಇನ್ನೊಂದು ಬಾರಿ ಮನೆಗೆ ಬಂದು ಝೌನನ್ನು ಬಿಟ್ಟು ಬಿಡಲು ನಿರಾಕರಿಸಿದ್ದಕ್ಕಾಗಿ ಸಿಎಂ ಮತ್ತವರ ಪತ್ನಿ ಆಕ್ರೋಶದಿಂದಿದ್ದಾರೆಂದು ಹೇಳಿದರು. ಮುಂದೆ ಡಿಜಿಪಿ ಕೂಡ ತನಗೆ ಈ ಪ್ರಕರಣದ ಚಾರ್ಜ್ ಶೀಟ್ ಅನ್ನು ವಾಪಸ್ ಪಡೆಯುವಂತೆಯೂ  ಹೇಳಿದ್ದರು ಎಂದು ಬೃಂದಾ ತಮ್ಮ ಅಫಿಡವಿಟ್‍ನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News