ಲಾಕ್ ಡೌನ್ ನಿಂದ ನಿರುದ್ಯೋಗಿಗಳಾಗಿದ್ದೇವೆ: ಹೈಕೋರ್ಟ್ ಮೆಟ್ಟಿಲೇರಿದ ಏರ್ ಇಂಡಿಯಾ ದಿನಗೂಲಿ ನೌಕರರು

Update: 2020-07-17 13:58 GMT

ಮುಂಬೈ, ಜು. 17: ಲಾಕ್ ಡೌನ್ ನಿಂದ ನಾವು ನಿರುದ್ಯೋಗಿಗಳಾಗಿದ್ದೇವೆ. ಏರ್ ಇಂಡಿಯಾ ವೇತನ ನೀಡಲು ನಿರಾಕರಿಸುತ್ತಿದೆ. ಆದುದರಿಂದ ಉದ್ಯೋಗ ನೀಡುವಂತೆ ಏರ್ ಇಂಡಿಯಾಕ್ಕೆ ನಿರ್ದೇಶಿಸಲು ಕೋರಿ ಏರ್ ಇಂಡಿಯಾದ ಕನಿಷ್ಠ 250 ದಿನಗೂಲಿ ನೌಕರರು ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 

ಈ ಮನವಿಯ ವಿಚಾರಣೆ ನಡೆಸಿದ ಆರ್.ಡಿ ಧಾನುಕಾ ಹಾಗೂ ವಿ.ಜಿ. ಬಿಶ್ಟ್ ಅವರನ್ನು ಒಳಗೊಂಡ ಪೀಠ, ಏರ್ ಇಂಡಿಯಾಕ್ಕೆ ನೋಟಿಸು ಜಾರಿ ಮಾಡಿದೆ ಹಾಗೂ ಎರಡು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. 
ಏರ್ ಇಂಡಿಯಾ ಕಾಮ್ಗಾರ್ ಸಂಘದ ಮೂಲಕ ಸಲ್ಲಿಸಲಾದ ಮಧ್ಯಂತರ ಮನವಿಯಲ್ಲಿ ದೂರುದಾರರು, ಹೆಚ್ಚಿನ ದಿನಗೂಲಿ ನೌಕರರು ಆರ್ಥಿಕವಾಗಿ ಹಿಂದುಳಿದವರು. ಅವರೆಲ್ಲ ಏರ್ ಇಂಡಿಯಾದ ದಿನಗೂಲಿಯನ್ನು ಅವಲಂಬಿಸಿದವರು ಎಂದು ಹೇಳಿದೆ. ಹಿರಿಯ ನ್ಯಾಯವಾದಿಗಳಾದ ಗಾಯತ್ರಿ ಸಿಂಗ್ ಹಾಗೂ ಮಣಿ ಮಾಥುರ್ ಮೂಲಕ ಏರ್ ಇಂಡಿಯಾದ ಕನಿಷ್ಠ 250 ದಿನಗೂಲಿ ನೌಕರರು ಈ ಮನವಿ ಸಲ್ಲಿಸಿದ್ದಾರೆ. 

ವರ್ಷದಲ್ಲಿ ಗರಿಷ್ಠ 250 ದಿನಗಳ ಕೆಲಸದ ಅವಕಾಶ ದಿನಗೂಲಿ ನೌಕರರಿಗೆ ಇದೆ ಹಾಗೂ ಅವರು ನೀಡಿದ ಸೇವೆಗೆ ಪ್ರತಿ ದಿನಕ್ಕೆ 535 ರೂಪಾಯಿ ನೀಡಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. “ನಾವು ಏರ್ ಇಂಡಿಯಾದಲ್ಲಿ 25-30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ” ಎಂದು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ದೂರುದಾರ ದಿನಗೂಲಿ ನೌಕರರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News