×
Ad

‘ಮುಸ್ಲಿಮರು, ದಲಿತರಿಗೆ ಹೊಡೆಯಿರಿ’: ದಿಲ್ಲಿ ಹಿಂಸಾಚಾರದ ವೇಳೆ ದಲಿತರನ್ನು ಗುರಿಯಾಗಿಸಿದ್ದ ಕೇಸರಿ ಪಡೆಗಳು

Update: 2020-07-17 19:43 IST

ಹೊಸದಿಲ್ಲಿ, ಜು.17: ಫೆಬ್ರವರಿ 23ರಂದು ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಸಂಘಪರಿವಾರ ಕೇವಲ ಮುಸ್ಲಿಮರ ಮತ್ತು ಪೌರತ್ವ ಕಾಯ್ದೆ ವಿರೋಧಿಗಳ ಮೇಲೆ ಮಾತ್ರ ದಾಳಿ ನಡೆಸಿರಲಿಲ್ಲ. ಗಲಭೆಕೋರರು ದಲಿತರ ಮೇಲೂ ದಾಳಿ ನಡೆಸಿದ್ದರು ಎಂಬುದನ್ನು ದಿಲ್ಲಿ ಪೊಲೀಸ್ ಕೇಂದ್ರ ಕಚೇರಿಗೆ ಬಂದಿರುವ ಹಲವು ದೂರುಗಳಲ್ಲಿ ಉಲ್ಲೇಖಿಸಲಾಗಿದೆ ಎಂದು thequint.com ವರದಿ ಮಾಡಿದೆ.

“ಕಪಿಲ್ ಮಿಶ್ರಾ, ನೀವು ದೊಣ್ಣೆಯಿಂದ ಹೊಡೆಯಿರಿ, ನಾವು ನಿಮ್ಮೊಂದಿಗಿದ್ದೇವೆ. ಮುಸ್ಲಿಮರನ್ನು, ಜಾಠವ್ ದಲಿತರನ್ನು, ಭೀಮ್ ಸೇನೆಯ ಮುಖಂಡ ಚಂದ್ರಶೇಖರ್ ಆಝಾದ್ ‘ರಾವಣ್’ರನ್ನು ಹೊಡೆಯಿರಿ. ನಾವು ನಿಮ್ಮೊಂದಿಗಿದ್ದೇವೆ” ಸೇರಿದಂತೆ ಮುಂತಾದ ಘೋಷಣೆಗಳನ್ನು ಕೇಸರಿ ಪಡೆಗಳು ಮೊಳಗಿಸಿವೆ. ಬಳಿಕ ಕಪಿಲ್ ಮಿಶ್ರಾ ಪ್ರಚೋದನಕಾರಿ ಭಾಷಣ ಆರಂಭಿಸಿ, “ನಮ್ಮ ಮನೆಯ ಶೌಚಾಲಯ ಸ್ವಚ್ಛಗೊಳಿಸುವ ಈ ಜನರನ್ನು ನಮ್ಮ ತಲೆಯ ಮೇಲೆ ಕೂರಿಸಬಹುದೇ? ಎಂದು ಪ್ರಶ್ನಿಸಿದಾಗ ಅಲ್ಲಿದ್ದ ಗುಂಪು ‘ಖಂಡಿತಾ ಇಲ್ಲ’ ಎಂದಿದೆ. ಮಾತು ಮುಂದುವರಿಸಿದ್ದ ಮಿಶ್ರಾ ಈ ಮುಸ್ಲಿಮರು ಮೊದಲು ಸಿಎಎ ಮತ್ತು ಎನ್ಆರ್ ಸಿ ವಿರೋಧಿಸಿ ಪ್ರತಿಭಟಿಸುತ್ತಿದ್ದರು. ಈಗ ಮೀಸಲಾತಿ ವಿಷಯದ ಬಗ್ಗೆಯೂ ಪ್ರತಿಭಟನೆ ಆರಂಭಿಸಿದ್ದಾರೆ. ಇವರಿಗೆ ಸೂಕ್ತ ಪಾಠ ಕಲಿಸಬೇಕಿದೆ” ಎಂದು ಹೇಳಿದ್ದರು. ಇದಾದ ಬಳಿಕ ಹಿಂಸಾಚಾರ ಆರಂಭವಾಗಿರುವುದಾಗಿ ಪೊಲೀಸ್ ಕೇಂದ್ರ ಕಚೇರಿಗೆ ಹಲವು ದೂರು ಸಲ್ಲಿಸಲಾಗಿದೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ.

ಪೊಲೀಸರು ಕೂಡಾ ಈ ಹಿಂಸಾಚಾರದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಕೇಸರಿ ನಾಯಕಿ ರಾಗಿಣಿ ತಿವಾರಿ ಎಂಬಾಕೆ ‘ದಲಿತರನ್ನು ಕಡಿದು ಹಾಕಿ’ ಎಂದು ಬೆಂಬಲಿಗರಿಗೆ ಕರೆ ನೀಡುವ ವೀಡಿಯೊವನ್ನು ದೂರಿನ ಜತೆ ಲಗತ್ತಿಸಲಾಗಿದೆ. ಹಿಂದುತ್ವದಲ್ಲಿರುವ ಮೂಲಭೂತವಾದವನ್ನು ಬಹಿರಂಗೊಳಿಸಿದ ಡಾ ಬಿ.ಆರ್ ಅಂಬೇಡ್ಕರ್ ರನ್ನು ಸೈದ್ಧಾಂತಿಕ ಶತ್ರು ಎಂದು ಬಲಪಂಥೀಯರು ಪರಿಗಣಿಸಿದ್ದಾರೆ. ಆದ್ದರಿಂದ ದಿಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಅವರ ಫೋಟೋವನ್ನು ಕೇಸರಿ ಪಡೆಗಳು ಹರಿದು ಹಾಕಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ಕವಯಿತ್ರಿ ಮತ್ತು ದಲಿತ ಸಾಹಿತಿ ಮೀನಾ ಕಂದಸಾಮಿ ಹೇಳಿದ್ದಾರೆ.

ದಲಿತರು ಮತ್ತು ಮುಸ್ಲಿಮರು ಒಂದೇ ಎಂದು ಸಂಘ ಪರಿವಾರ ಭಾವಿಸಿರುವುದು ಸ್ಪಷ್ಟವಾಗಿದೆ. ಸಂಘ ಪರಿವಾರ- ಮೇಲ್ಜಾತಿಯ ಕ್ರೋಧ ಮತ್ತು ಹಿಂದುತ್ವ ರಾಜಕಾರಣ ಒಂದಕ್ಕೊಂದು ಬೆಸೆದುಕೊಂಡಿದೆ ಎಂದವರು ಹೇಳಿದ್ದಾರೆ. 1990ರ ದಶಕದ ಉತ್ತರಾರ್ಧದಲ್ಲಿ ಕಾಲೇಜು ಕ್ಯಾಂಪಸ್ ಗಳಲ್ಲಿ ಮಂಡಲ್ ವಿರೋಧಿ, ಮೇಲ್ವರ್ಗದ ಹಿಂದೂಗಳ ಪ್ರತಿಭಟನೆ ಮತ್ತು ಗಲಭೆ ಆರಂಭವಾಗಿದ್ದು ಇದರ ಲಾಭವನ್ನು ಎಲ್.ಕೆ. ಅಡ್ವಾಣಿಯವರ ರಥಯಾತ್ರೆಯ ಸಂದರ್ಭ ಪಡೆಯಲಾಗಿದೆ ಮತ್ತು ಇವೆಲ್ಲವೂ 1992ರಲ್ಲಿ ಬಾಬರಿ ಮಸೀದಿಯನ್ನು ಕೆಡಹುವ ಮೂಲಕ ಸಮಾಪ್ತಿಯಾಗಿದೆ. ಸಂಘ ಪರಿವಾರದ ಮುಸ್ಲಿಮ್ ವಿರೋಧಿ ಮುಖದೊಂದಿಗೆ ದಲಿತ ವಿರೋಧಿ, ಒಬಿಸಿ ವಿರೋಧಿ ಡಿಎನ್ಎಯನ್ನು ಪ್ರತ್ಯೇಕಿಸಲು ಅಸಾಧ್ಯ ಎಂದು ಮೀನಾ ಕಂದಸಾಮಿ ಅಭಿಪ್ರಾಯಪಟ್ಟಿದ್ದಾರೆ ಎಂದು ‘ದಿ ಕ್ವಿಂಟ್’ನ ಲೇಖನದಲ್ಲಿ ವಿವರಿಸಲಾಗಿದೆ.

ಇದೇ ಅಭಿಪ್ರಾಯವನ್ನು ಭೀಮ್ ಸೇನೆಯ ಮುಖಂಡ ಚಂದ್ರಶೇಖರ್ ಆಝಾದ್ ಕೂಡಾ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್ ಗುಂಪು ಯಾವಾಗಲೂ ದಲಿತ ವಿರೋಧಿಯಾಗಿದೆ. ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದ ದಲಿತರ ಮೇಲಿನ ಆಕ್ರೋಶವನ್ನು ಅಂಬೇಡ್ಕರ್ ಫೋಟೋ ಹರಿದು ಹಾಕುವ ಮೂಲಕ ಹೊರಗೆಡವಿದ್ದಲ್ಲಿ ಆಶ್ಚರ್ಯವೇನಿಲ್ಲ ಎಂದವರು ಹೇಳಿದ್ದಾರೆ. ಈ ಹಿಂದೆ ಮುಸ್ಲಿಮರ ಮೇಲೆ ದಾಳಿ ನಡೆಸಲು ದಲಿತರನ್ನು ಮತ್ತು ಒಬಿಸಿ ವರ್ಗದವರನ್ನು ಸಂಘಪರಿವಾರ ಸಂಘಟನೆಗಳು ಬಳಸಿಕೊಂಡಿದ್ದವು. ಮುಸ್ಲಿಮರು ಮತ್ತು ದಲಿತರು ಒಗ್ಗೂಡುವ ಸಾಧ್ಯತೆ ಆರೆಸ್ಸೆಸ್ ಗೆ ಎದುರಾಗಿರುವ ಅತೀ ದೊಡ್ಡ ಬೆದರಿಕೆಯಾಗಿದೆ. ಇದು ರಾಜಕೀಯವಾಗಿ ಅವರ ಅತೀ ದೊಡ್ಡ ಅಸ್ತಿತ್ವವಾದದ ಭಯವಾಗಿದೆ ಎಂದು ‘ದಿ ಕಾರವಾನ್’ ನ ಪೊಲಿಟಿಕಲ್ ಎಡಿಟರ್ ಹರ್ತೋಷ್ ಸಿಂಗ್ ಬಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News