ಜಿಲ್ಲೆಯಲ್ಲಿ ಹೊಸ ಕಾಮಗಾರಿಗಳಿಗೆ ಆದ್ಯತೆ ನೀಡಿ: ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು
ಉಡುಪಿ, ಜು.17: ಜಿಲ್ಲಾ ಪಂಚಾಯತ್‌ಗೆ ನೀಡಲಾಗುವ ಅನುದಾನದಲ್ಲಿ ಹಿಂದಿನ ಕಾಮಗಾರಿಗಳ ಬಾಕಿ ಮೊತ್ತ ಪಾವತಿಗೆ ಹೆಚ್ಚಿನ ಅನುದಾನ ನೀಡದೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಮುಕ್ತಾಯಗೊಳಿಸಲು ಪ್ರಥಮ ಆದ್ಯತೆ ನೀಡುವಂತೆ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.
ಶುಕ್ರವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಜಿಪಂಗೆ ನೀಡುವ ಅನುದಾನದಲ್ಲಿ ಹೆಚ್ಚಿನ ಮೊತ್ತವನ್ನು ಹಿಂದಿನ ವರ್ಷದ ಕಾಮಗಾರಿಗಳ ಬಾಕಿ ಮೊತ್ತ ಪಾವತಿಗೆ ಬಳಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದಿನಕರಬಾಬು, ಇದರಿಂದ ಪ್ರಸಕ್ತ ವರ್ಷದಲ್ಲಿ ಕೈಗೊಳ್ಳಬೇಕಾದ ನೂತನ ಕಾಮಗಾರಿಗಳ ಪ್ರಗತಿಗೆ ತೊಡಕಾಗುತ್ತಿದೆ. ಸಾರ್ವಜನಿಕರಿಗೆ ಹೊಸ ಯೋಜನೆಗಳ ಪ್ರಯೋಜನ ದೊರೆಯುತ್ತಿಲ್ಲ. ಇನ್ನು ಮುಂದೆ ಪ್ರತಿ ವರ್ಷ ಆ ವರ್ಷ ನಿಗದಿಪಡಿಸಿದ ಕಾಮಗಾರಿಗಳನ್ನು ಅದೇ ವರ್ಷದಲ್ಲಿ ಪೂರ್ಣಗೊಳಿಸಿ. ಸಂಪೂರ್ಣ ಮೊತ್ತವನ್ನು ಪಾವತಿಸಿ, ಮುಂದಿನ ವರ್ಷಕ್ಕೆ ಬಾಕಿ ಇಡಬೇಡಿ ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಪಂನಲ್ಲಿ 2019-20ರ ಸಾಲಿನಲ್ಲಿ ಕಟ್ಟಡ ಕಾಮಗಾರಿಗೆ ಮೀಸಲಿಟ್ಟಿದ್ದ 65 ಲಕ್ಷ ರೂ ಅನುದಾನವನ್ನು ಸಂಬಂಧಪಟ್ಟ ಕಾಮಗಾರಿ ನಿರ್ವಹಿಸುವ ಇಲಾಖೆಗೆ ಬಿಡುಗಡೆಗೊಳಿಸದೇ, ಅನುದಾನವನ್ನು ಲ್ಯಾಪ್ಸ್ ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು ಮತ್ತು ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸಾಕಷ್ಟು ಮುಂಚಿತವಾಗಿ ಅನುದಾನ ಬಿಡುಗಡೆಯಾಗಿದ್ದರೂ, ಅಭಿವೃಧ್ದಿ ಕಾಮಗಾರಿ ಕೈಗೊಳ್ಳದ ಕುರಿತು ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ತನಿಖೆ ನಡೆಸುವಂತೆ ಆಗ್ರಹಿಸಿದರು.
ಪ್ರತೀ ವರ್ಷ ಜಿಪಂ ಅನುದಾನದಲ್ಲಿ ಹಿಂದಿನ ಕಾಮಗಾರಿಗಳ ಬಾಕಿ ಮೊತ್ತ ಪಾವತಿಗೆ ಪ್ರಸಕ್ತ ವರ್ಷದ ಅನುದಾನ ಬಳಕೆ, ನೀಡಿರುವ ಅನುದಾನವನ್ನು ಲ್ಯಾಪ್ಸ್ ಮಾಡುತ್ತಿರುವ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷ ದಿನಕರ ಬಾಬು, ಈ ರೀತಿ ಮಾಡುವುದು ಜಿಪಂನ ಆಡಳಿತ ವ್ಯವಸ್ಥೆಯ ವೈಫಲ್ಯವಾಗುತ್ತದೆ. ಆದ್ದರಿಂದ ಸಂಬಂದಪಟ್ಟ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
95.6ಶೇ.ಮಳೆ: ಜಿಲ್ಲೆಯಲ್ಲಿ ಇದುವರೆಗೆ 1965 ಮಿ.ಮೀ ಮಳೆ ಆಗಿದ್ದು, ವಾಡಿಕೆ ಮಳೆಯ ಶೇ.95.6ರಷ್ಟು ಮಳೆಯಾಗಿದೆ. ಈವರೆಗೆ 2564 ಕ್ವಿಂ. ಬಿತ್ತ್ತನೆ ಬೀಜ ವಿತರಿಸಲಾಗಿದೆ. 1077 ಟನ್ ರಸಗೊಬ್ಬರ ವಿತರಿಸಿದ್ದು, 900 ಟನ್ ಇನ್ನೂ ದಾಸ್ತಾನು ಇದೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯಕ್ ಮಾಹಿತಿ ನೀಡಿದರು.
ಕೋವಿಡ್-19ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 1895 ಪ್ರಕರಣ ವರದಿಯಾಗಿದ್ದು, 428 ಸಕ್ರಿಯ ಪ್ರಕರಣಗಳಿವೆ. ಒಟ್ಟು 8 ಸಾವು ಸಂಭವಿಸಿದ್ದು, ಕೋವಿಡ್‌ನೊಂದಿಗೆ ಇತರೆ ಕಾಯಿಲೆ ಇದ್ದ ಕಾರಣ ಈ ಸಾವು ಸಂಭವಿಸಿದೆ. ನೇರವಾಗಿ ಕೋವಿಡ್-19ನಿಂದ ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿ ಚಿಕಿತ್ಸೆಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸಹ ಶೇ.50ರಷ್ಟು ಬೆಡ್‌ಗಳನ್ನು ಮೀಸಲಿಡಲಾಗಿದೆ. ಸಾರ್ವಜನಿಕ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಹೆಚ್ಚಿನ ಕೋವಿಡ್ ಪರೀಕ್ಷೆ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಕೆಂಎಸಿಯಲ್ಲಿ ದಿನಕ್ಕೆ 500-600 ಹಾಗೂ ಜಿಲ್ಲಾ ಆಸ್ಪತ್ರೆಯ ಲ್ಯಾಬ್ ನಲ್ಲಿ 250-300 ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಕೈಗಾರಿಕಾ ಇಲಾಖೆಯಿಂದ ಫಲಾನುಭವಿಗಳಿಗೆ ನೀಡುವ ವಿವಿಧ ಪರಿಕರಗಳನ್ನು ಶೀಘ್ರದಲ್ಲಿ ವಿತರಿಸುವಂತೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.