ಕ್ವಾರಂಟೈನ್ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ: ಉಡುಪಿ ಜಿಲ್ಲಾಧಿಕಾರಿ

Update: 2020-07-17 14:34 GMT

ಉಡುಪಿ, ಜು.17: ಜಾಗತಿಕ ಸೋಂಕಾಗಿರುವ ಕೋವಿಡ್-19 ರೋಗವು ಹರಡುವುದನ್ನು ನಿಯಂತ್ರಣ ಮಾಡುವ ಹಾಗೂ ಇದರಿಂದ ಉಂಟಾಗುವ ಅನಾರೋಗ್ಯ ಸ್ಥಿತಿ ಮತ್ತು ಮರಣಗಳನ್ನು ತಡೆಗಟ್ಟುವ ಸಲುವಾಗಿ ಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಗಳನ್ನು, ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳನ್ನು ಹಾಗೂ ಹೊರ ರಾಜ್ಯ/ದೇಶದಿಂದ ಬರುವ ವ್ಯಕ್ತಿಗಳನ್ನು ಸರಕಾರದ ಮಾರ್ಗಸೂಚಿ ಪ್ರಕಾರ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ.

ಸಾರ್ವಜನಿಕ ಆರೋಗ್ಯ ಮತ್ತು ಕ್ಷೇಮದ ಹಿದೃಷ್ಟಿಯಿಂದ ಹೊರ ರಾಜ್ಯ/ದೇಶಗಳ ಪ್ರಯಾಣಿಕರು, ಕೋವಿಡ್-19 ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿತರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಪಡುವುದನ್ನು ಖಾತ್ರಿಪಡಿಸಲು ಮತ್ತು ನೀಡಲಾದ ಸೂಚನೆಗಳನ್ನು ಅನುಸರಣೆ ಮಾಡುವ ಸಲುವಾಗಿ ಹಾಗೂ ಹೋಂ ಕ್ವಾರಂಟೈನ್‌ನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಹೋಂ ಕ್ವಾರಂಟೈನ್‌ನ್ನು ಉಲ್ಲಂಘನೆ ಮಾಡಿರುವ ವ್ಯಕ್ತಿಯ ವಿರುದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರಕಾರದಿಂದ ನಿರ್ದೇಶನವಿದೆ.

ಹೋಮ್ ಕ್ವಾರಂಟೈನ್ ವಾಚ್ ಆ್ಯಪ್ ತಂತ್ರಾಶದ ಮೂಲಕ ಹೋಂ ಕ್ವಾರಂಟೈನ್‌ನಲ್ಲಿ ಇರುವವರನ್ನು ಪ್ರತಿದಿನ ನಿಗದಿತ ಅಧಿಕಾರಿಗಳ ಮುಖಾಂತರ ಭೌತಿಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೇ ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿಗಳು ತಮ್ಮ ಸೆಲ್ಫಿಯನ್ನು ಅಪಲೋಡ್ ಮಾಡಬೇಕಿದೆ. ಅಲ್ಲದೇ ಕ್ವಾರಂಟೈನ್ ಜಿಯೋ ಫೆನ್ಸಿಂಗ್ ಬ್ರೀಚ್ ಮೂಲಕ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿರುವವರನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಲಾಗುತ್ತಿದೆ. ಇಂತಹವರ ವಿರುದ್ಧ ಈಗಾಗಲೇ 11 ಪ್ರಕರಣಗಳನ್ನು ದಾಖಲಿಸಲಾಗಿದೆ.

ಆದ್ದರಿಂದ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಟ್ಟ ಯಾವುದೇ ವ್ಯಕ್ತಿಗಳು ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲು ಆಯಾ ತಾಲೂಕಿನ ತಹಶೀಲ್ದಾರರು, ಕಾರ್ಯ ನಿರ್ವಾಹಣಾಧಿಕಾರಿಗಳು ಮತ್ತು ಫ್ಲೈಯಿಂಗ್ ಸ್ಕ್ವಾಡ್‌ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಸ್ವಾಸ್ಥದ ದೃಷ್ಟಿಯಿಂದ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ರೀತಿಯ ಕ್ರಮಕೈಗೊಳ್ಳ ಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News