ದ.ಕ. ಜಿಲ್ಲೆಯಲ್ಲಿ ಒಂದೇ ದಿನ 311 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿಗೆ ಎಂಟು ಮಂದಿ ಬಲಿ
ಮಂಗಳೂರು, ಜು.17: ಕೋವಿಡ್ ಮಹಾಮಾರಿಗೆ ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಎಂಟು ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಒಂದೇ ದಿನ 311 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಡುವ ಮೂಲಕ 3000ದ ಗಡಿ ದಾಡಿದೆ.
ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಮೃತರ ಪೈಕಿ 12 ಮಂದಿ ಹೊರ ಜಿಲ್ಲೆಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾದವರು.
ಮಂಗಳೂರು ತಾಲೂಕಿನ ಮೂವರು, ಬೆಳ್ತಂಗಡಿ, ಸುಳ್ಯ, ದಾವಣಗೆರೆಯ ಚೆನ್ನಗಿರಿ, ಉತ್ತರಕನ್ನಡದ ಶಿರಸಿ, ಭಟ್ಕಳದ ತಲಾ ಓರ್ವರು ಮೃತಪಟ್ಟಿದ್ದಾರೆ. ಕೋವಿಡ್‌ಗೆ ಬಲಿಯಾದವರೆಲ್ಲ 58 ವರ್ಷಕ್ಕೆ ಮೇಲ್ಪಟ್ಟವರು. ಮೃತರು ವಿವಿಧ ರೋಗಳಿಂದ ಬಳಲುತ್ತಿದ್ದು, ಬಹುತೇಕ ಮಂದಿಗೆ ಐಸಿಯುನಲ್ಲಿ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮಂಗಳೂರು ತಾಲೂಕಿನ 72 ವರ್ಷದ ವೃದ್ಧೆಯು ಮಧುಮೇಹ, ಹೈಪೊಥರಾಯ್ಡೆ, ಮೂತ್ರಪಿಂಡ ಸಮಸ್ಯೆ, 56 ವರ್ಷದ ಪುರುಷನು ಮಧುಮೇಹ, ಲಿವರ್ ಕಾಯಿಲೆ, 72 ವರ್ಷದ ಪುರುಷನು ದೀರ್ಘಕಾಲದ ಮಧುಮೇಹ, ಫಿಲೆರಿಯಾಸಿಸ್, ಹೃದಯಸಂಬಂಧಿ ಕಾಯಿಲೆ, ಹೃದಯಸ್ತಂಭನದಿಂದ ಬಳಲುತ್ತಿದ್ದರು.
ಬೆಳ್ತಂಗಡಿ ತಾಲೂಕಿನ 65 ವರ್ಷದ ಪುರುಷನು ಹೃದಯ ಮತ್ತು ಶ್ವಾಸಕೋಶ, ಹೈಪೊಕ್ಸೆಮಿಕ್‌ನಿಂದ ಬಳಲುತ್ತಿದ್ದರು. ಸುಳ್ಯ ತಾಲೂಕಿನ 53 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು.
ಉತ್ತರಕನ್ನಡದ ಶಿರಸಿಯ 70 ವರ್ಷದ ವೃದ್ಧ ‘ಬಿಎಆರ್’ ಸಿಂಡ್ರೋಮ್, ಮಧುಮೇಹ, ಭಟ್ಕಳದ 68 ವರ್ಷದ ವೃದ್ಧ ದೀರ್ಘಕಾಲದ ಮಧುಮೇಹ, ವಿವಿಧ ಅಂಗಾಂಗ ವೈಫಲ್ಯ, ದಾವಣಗೆರೆಯ ಚೆನ್ನಗಿರಿಯ 69 ವರ್ಷದ ವೃದ್ಧ ಹೃದಯಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ತಂಬಾಕು ಅವಲಂಬನೆ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಒಂದೇ ದಿನ 311 ಮಂದಿಗೆ ಕೊರೋನ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತೀರಾ ಹೆಚ್ಚಳವಾಗುತ್ತಿದೆ. ಇದೇ ಮೊದಲ ಬಾರಿಗೆ ಶುಕ್ರವಾರ 311 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಜು.16ರಂದು ಜಿಲ್ಲೆಯಲ್ಲಿ 238 ಕೇಸ್‌ಗಳು ದಾಖಲಾಗಿರುವುದು ದೊಡ್ಡ ಸಂಖ್ಯೆಯಲ್ಲಿತ್ತು. ಇದರಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗುವಂತಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸೋಂಕು ತಗುಲಿದವರ ಸಂಖ್ಯೆ 3,074ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಸೋಂಕಿತರಲ್ಲಿ ನೂರಕ್ಕೂ ಅಧಿಕ ಮಂದಿಗೆ ಸೋಂಕು ಯಾರಿಂದ ಹರಡಿದೆ ಎನ್ನುವುದೇ ಗೊತ್ತಿಲ್ಲವಾದರೆ, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದಲೂ ಹೆಚ್ಚಿನವರಿಗೆ ಸೋಂಕು ಹರಡಿದೆ. ಕೆಲವೆಡೆ ಪ್ರಸ್ತುತ ಗೃಹ ನಿಗಾವಣೆಯಲ್ಲಿರುವ ಸೋಂಕಿತರಿಂದಲೂ ಮನೆಯವರಿಗೆ ಹರಡುತ್ತಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 115 ಮಂದಿ ಶುಕ್ರವಾರ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ 1,278 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎನ್ನುವುದು ಆಶಾದಾಯಕ ಸಂಗತಿಯಾಗಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 1,725 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರು ಐಸಿಯು, ವೆಂಟಿಲೇಟರ್‌ಗಳಲ್ಲಿ ದಾಖಲಾಗಿದ್ದಾರೆ.
ಮನೆಯಲ್ಲೇ ಚಿಕಿತ್ಸೆ ಅವಕಾಶ:
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇ.50 ಲಕ್ಷಣ ರಹಿತರಿದ್ದು, ಸರ್ಕಾರದ ಆದೇಶದಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಅವಕಾಶ ಇದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಮಂಗಳೂರು ಮಾನಗರ ಪಾಲಿಕೆಯ ಕಮಾಂಡ್ ಕಂಟ್ರೋಲ್ ಸೆಂಟರ್ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದೂರವಾಣಿ ಹಾಗೂ ವೀಡಿಯೋ ಕಾಲ್ ಮೂಲಕ ರೋಗಿಗಳನ್ನು ಸಂಪರ್ಕಿಸಲಾಗುತ್ತಿದೆ. ಸ್ಥಳೀಯ ವೈದ್ಯರ ನೆರವಿನಿಂದ ಅವರಿಗೆ ಕೌನ್ಸೆಲಿಂಗ್ ಮಾಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಆಂಬ್ಯುಲೆನ್ಸ್ ಸಂಬಂಧಿತ ಮಾಹಿತಿಗಾಗಿ 108, 1077 ಮತ್ತು ದೂರವಾಣಿ ಸಂಖ್ಯೆ 0824-2441444 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.