ಎದುರಾಳಿಗಳನ್ನು ವಿಭಜಿಸಲು ನೇಪಾಳ ಪ್ರಧಾನಿ ಯತ್ನ ?

Update: 2020-07-17 17:47 GMT

ಕಠ್ಮಂಡು (ನೇಪಾಳ), ಜು. 17: ‘ನಾನು ರಾಜೀನಾಮೆ ನೀಡಿದ ಬಳಿಕ ನನ್ನ ಸ್ಥಾನಕ್ಕೆ ಬರುವವರು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಾರ್ಟಿ (ಎನ್ಸಿಪಿ)ಯಲ್ಲಿರುವ ಸಿಪಿಎನ್ (ಯೂನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) ಬಣಕ್ಕೆ ಸೇರಿದವರಾಗಿರಬೇಕು’ ಎಂದು ನೇಪಾಳ ಪ್ರಧಾನಿ  ಪ್ರಸಾದ್ ಶರ್ಮ ಒಲಿ ಹೇಳಿದ್ದಾರೆ.

ಪ್ರಧಾನಿ ಒಲಿ ರಾಜೀನಾಮೆ ನೀಡಬೇಕೆಂದು ಆಡಳಿತಾರೂಢ ಪಕ್ಷದಲ್ಲಿರುವ ಅವರ ಎದುರಾಳಿಗಳು ವಾರಗಳಿಂದ ಒತ್ತಡ ಹೇರುತ್ತಿದ್ದಾರೆ.
ಪಕ್ಷದ ಇನ್ನೊಬ್ಬ ನಾಯಕ ಪುಷ್ಪ ಕಮಾಲ್ ದಹಲ್ ಜೊತೆ ಗುರುವಾರ ನಡೆಸಿದ ಸಭೆಯಲ್ಲಿ ಅವರು ಈ ಸಲಹೆಯನ್ನು ಮುಂದಿಟ್ಟಿದ್ದಾರೆ. ತನ್ನ ಎದುರಾಳಿ ಬಣದ ನಾಯಕರ ನಡುವೆ ವೈಮನಸ್ಸು ಮೂಡಿಸುವ ಉದ್ದೇಶವನ್ನು ಅವರ ಈ ಸಲಹೆ ಹೊಂದಿದೆ ಎಂಬುದಾಗಿ ರಾಜಕೀಯ ವೀಕ್ಷಕರು ಭಾವಿಸಿದ್ದಾರೆ.
ಒಲಿ ಸ್ಥಾನಕ್ಕೆ ಪ್ರಧಾನಿಯಾಗಿ ಬರಲಿದ್ದಾರೆ ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿರುವ ದಹಲ್ ಸಿಪಿಎನ್ (ಮಾವೋಯಿಸ್ಟ್ ಸೆಂಟರ್)ಗೆ ಸೇರಿದವರಾಗಿದ್ದಾರೆ. 2018ರಲ್ಲಿ ಈ ಎರಡು ಪಕ್ಷಗಳು ಏಕೀಕರಣಗೊಂಡು ನೇಪಾಳ ಕಮ್ಯುನಿಸ್ಟ್ ಪಾರ್ಟಿ ಆಗಿದೆ.
‘‘ಇದು ತನ್ನ ಎದುರಾಳಿಗಳನ್ನು ವಿಭಜಿಸುವ ಹಾಗೂ ದಹಲ್ ಮತ್ತು ಇನ್ನೋರ್ವ ಮಾಜಿ ಪ್ರಧಾನಿ ಮಾಧವ ನೇಪಾಳರ ನಡುವೆ ಜಗಳ ತಂದಿಡುವ ಅವರ ಪ್ರಯತ್ನವಾಗಿದೆ. ಮೊದಲು ಪ್ರಧಾನಿ ಅಧಿಕಾರದಿಂದ ಕೆಳಗಿಳಿಯಬೇಕೆಂಬ ಬಗ್ಗೆ ಮಾಧವ ನೇಪಾಳ ಮತ್ತು ದಹಲ್ ದೃಢ ನಿರ್ಧಾರ ಹೊಂದಿದ್ದಾರೆ’’ ಎಂದು ಎನ್ಸಿಪಿ ನಾಯಕರೊಬ್ಬರು ‘ಹಿಂದೂಸ್ತಾನ್ ಟೈಮ್ಸ್’ಗೆ ಹೇಳಿದರು.
44 ಸದಸ್ಯರು ಸ್ಥಾಯಿ ಸಮಿತಿಯು ರವಿವಾರ ಸಭೆ ಸೇರಲಿದ್ದು, ಪ್ರಧಾನಿ ಕೆ.ಪಿ. ಶರ್ಮ ಒಲಿಯ ಹಣೆಬರಹವನ್ನು ನಿರ್ಧರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News