ಕೊರೋನ ಪ್ರಕರಣ ಹೆಚ್ಚುತ್ತಿರುವುದರಿಂದ ಬಸ್ ಸಂಚಾರ ಸ್ಥಗಿತ: ಉಡುಪಿ ಡಿಸಿ ಜಗದೀಶ್ ಸ್ಪಷ್ಟನೆ

Update: 2020-07-18 07:23 GMT

ಉಡುಪಿ, ಜು.17: ಹೊರಗಿನಿಂದ ಸಾಕಷ್ಟು ಕೊರೋನ ಪ್ರಕರಣಗಳು ಬರುತ್ತಿರುವುದರಿಂದ ಜಿಲ್ಲೆಯ ಗಡಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿ ಜಿಲ್ಲೆಯೊಳಗೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜನ ಹೆಚ್ಚು ಸೇರುವ ಸಾರ್ವಜನಿಕ ಸಾರಿಗೆಯನ್ನು 14 ದಿನಗಳ ಕಾಲ ಬಂದ್ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಪುನಾರಂಭಗೊಂಡ ಸಾರ್ವಜನಿಕ ಸಾರಿಗೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಯಾವುದೇ ಸುರಕ್ಷಿತ ಅಂತರ ಕಾಪಾಡದೆ ಸಾಕಷ್ಟು ಪ್ರಯಾಣಿಕರನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಇದರ ವಿರುದ್ಧ 25ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೂ ಕೂಡ ಸಾರ್ವ ಜನಿಕರು, ಬಸ್ ಮಾಲಕರು, ಚಾಲಕರು ಮತ್ತು ನಿರ್ವಹಕರು ಸರಿಯಾದ ರೀತಿಯಲ್ಲಿ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಹೀಗಾಗಿ ಬಸ್ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದರು.

ಸಾರ್ವಜನಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಮತ್ತು ಜನ ಹೆಚ್ಚು ಸೇರುವಲ್ಲಿ ಕೊರೋನ ವೈರಸ್ ಬಹಳ ಬೇಗವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತ ಈ ಕ್ರಮವನ್ನು ತೆಗೆದುಕೊಂಡಿದೆ. ಜು.29ರ ನಂತರ ಬಸ್ ಸಂಚಾರ ಮತ್ತೆ ಪುನಾರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಮ್ಮ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News