×
Ad

ಅನಿವಾಸಿ ಕನ್ನಡಿಗರನ್ನು ಹೊತ್ತು ಕತರ್ ನಿಂದ ಮಂಗಳೂರು ತಲುಪಿದ ಪ್ರಥಮ ಚಾರ್ಟಡ್ ವಿಮಾನ

Update: 2020-07-18 17:59 IST

ಮಂಗಳೂರು, ಜು.18: ಕೋವಿಡ್-19 ನಿಂದ ವಿಮಾನಯಾನ ರದ್ದಾದ ಹಿನ್ನೆಲೆಯಲ್ಲಿ ಊರಿಗೆ ಮರಳಲಾಗದೆ ಕತರ್‌ನಲ್ಲಿ ತೊಂದರೆಗೊಳಗಾಗಿದ್ದ ಅನಿವಾಸಿ ಕನ್ನಡಿಗರ ಪೈಕಿ 174 ಪ್ರಯಾಣಿಕರನ್ನು ಹೊತ್ತ ಪ್ರಥಮ ಚಾರ್ಟಡ್ ವಿಮಾನವು ಗುರುವಾರ ಮಂಗಳೂರು ತಲುಪಿತು. ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಹಕಾರದಿಂದ ಬಂದಿಳಿದ ವಿಮಾನದಲ್ಲಿ ಅನಾರೋಗ್ಯಕ್ಕೀಡಾದವರು, ಗರ್ಭಿಣಿಯರು, ಎಳೆಯ ಮಕ್ಕಳು, ವೀಸಾ ಕಾಲಾವದಿ ಮುಗಿದವರು, ಉದ್ಯೋಗ ಕಳೆದುಕೊಂಡವರು ಹೀಗೆ ನಾನಾ ಸಮಸ್ಯೆಯಿಂದ ತತ್ತರಿಸಿದ ಸಂತ್ರಸ್ತರಿದ್ದರು.

ರೋಗಿಯೊಬ್ಬರು ಕೊನೆಯ ಘಳಿಗೆಯಲ್ಲಿ ತುರ್ತಾಗಿ ಊರಿಗೆ ಹೋಗಲೇ ಬೇಕಾದ ಪರಿಸ್ಥಿತಿ ಬಂದಾಗ ಡಾ.ಆರತಿ ಕೃಷ್ಣ ಮಧ್ಯೆ ಪ್ರವೇಶಿಸಿ ಭಾರತೀಯ ರಾಯಭಾರ ಕಚೇರಿಯಿಂದ ಕ್ಲಿಯರೆನ್ಸ್ ಪಡೆಯುವ ಮೂಲಕ ಎಲ್ಲರೂ ಸಕಾಲದಲ್ಲಿ ಊರಿಗೆ ತಲುಪಿದರು. ಯಾತ್ರೆಯ ನೋಂದಣಿಯಿಂದ ಪ್ರಾರಂಭಿಸಿ, ಅಗತ್ಯ ದಾಖಲೆಗಳು ಮತ್ತು ಪಾಲಿಸಬೇಕಾದ ಆರೋಗ್ಯ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು ಕೆಸಿಎಫ್ ನೀಡಿತ್ತಲ್ಲದೆ, ಪಿಪಿಇ ಕಿಟ್ ಮತ್ತು ಲಘು ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿತ್ತು. ಈ ಪ್ರಯಾಣಿಕರು ಕ್ವಾರಂಟೈನ್ ಮುಗಿಸಿ ಮನೆ ಸೇರುವವರೆಗೂ ಈ ಪ್ರಕ್ರಿಯೆ ಮುಂದುವರಿಯಲಿದೆ.

ಕೆಸಿಎಫ್ ಆಯೋಜಿಸಿದ ಈ ವ್ಯವಸ್ಥೆಗೆ ಎನ್‌ಆರ್‌ಐ ಫೋರಮ್ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ ಯತೀಶ್ ಉಳ್ಳಾಲ್, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ಬೆಂಗಳೂರು ಹಾಗೂ ಬೆಂಗಳೂರು ನೋಡಲ್ ಅಧಿಕಾರಿ ಮೀನಾ ನಾಗರಾಜ್ ಸಹಕರಿಸಿದ್ದರು ಎಂದು ಕೆಸಿಎಫ್ ಕತರ್ ಚಾರ್ಟರ್ಡ್ ವಿಮಾನ ಸಮಿತಿಯ ಅಧ್ಯಕ್ಷ ಅಬ್ದುರ್ರಹೀಂ ಸಅದಿ ಮತ್ತು ಜನರಲ್ ಕನ್ವೀನರ್ ಮುನೀರ್ ಮಾಗುಂಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News