ಕಾಪು: ಭಾರೀ ಗಾಳಿ, ಮಳೆ; ಅಪಾರ ನಷ್ಟ
ಕಾಪು: ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಗೆ ತಾಲ್ಲೂಕಿನಾದ್ಯಂತ ಅಪಾರ ನಷ್ಟ ಉಂಟಾಗಿದೆ. ಭೀಕರ ಗಾಳಿ ಮಳೆಗೆ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳಗುಡ್ಡೆ ಪರಿಸರದಲ್ಲಿ ಸುಮಾರು 30ಕ್ಕೂ ಅಧಿಕ ಮರಗಳು ಬುಡ ಸಮೇತ ಧರೆಗೆ ಉರುಳಿದೆ. ಗಾಳಿಯ ತೀವ್ರತೆಗೆ ಬಡಾ ಗ್ರಾಮದ 3ನೇ ವಾರ್ಡಿನ ಮುಳ್ಳಗುಡ್ಡೆ ಕುಂಬಾರ ಕೇರಿ ಎಂಬಲ್ಲಿ ನಾಗ ಬನದ ಮೇಲ್ಚಾವಣಿಗೆ ಹಾನಿಯಾಗಿದೆ. ಇದರಿಂದ 1.5ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಲೀಲಾವತಿ ಎಂಬವರ ಮನೆಗೆ ಪಕ್ಕದಲ್ಲಿರುವ ದನದ ಕೊಟ್ಟಿಗೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಪಕ್ಕದ ಹಮೀದ್ ಶೇಖ್ ಎಂಬವರ ತೋಟದ ಹತ್ತಾರು ಮರಗಳು ಉರುಳಿ ಬಿದ್ದು ಅಪಾರ ನಷ್ಟ ಉಂಟಾಗಿದೆ.
ಕಾಪು ಪುರಸಭಾ ವ್ಯಾಪ್ತಿಯ ಪಡು ಗ್ರಾಮದ ರಘು ಕೆ. ಸಾಲ್ಯಾನ್ ಅವರ ಮನೆ ಭಗಶಃ ಹಾನಿಯಾಗಿದ್ದು. 40 ಸಾವಿರ ರೂ. ನಷ್ಟ ಉಂಟಾಗಿದೆ.
ಪಡುಬಿದ್ರಿಯ ಕೊಂಬೆಟ್ಟುವಿನಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಈ ಭಾಗದಲ್ಲಿ ಮೂರು ಮನೆಗಳು ಜಲಾವೃತಗೊಂಡಿದೆ. ಮಳೆ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದರಿಂದ ಜಲಾವೃತಗೊಳ್ಳಲು ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.