ದ.ಕ. ಜಿಲ್ಲೆಯಲ್ಲಿ ಶನಿವಾರ 237 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿಗೆ ನಾಲ್ವರು ಬಲಿ
ಮಂಗಳೂರು, ಜು.18: ದ.ಕ. ಜಿಲ್ಲೆಯ ಕೋವಿಡ್‌ನಿಂದಾಗಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಶನಿವಾರ ಒಂದೇ ದಿನದಲ್ಲಿ 237 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಕೊರೋನ ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಮಂದಿ ಹೊರ ಜಿಲ್ಲೆಯವರು.
ಶನಿವಾರ ಸಾವಿಗೀಡಾದವರಲ್ಲಿ ಮೂವರು ಮಹಿಳೆಯರಾಗಿದ್ದರೆ, ಒಬ್ಬರು ಪುರುಷ. ಮೃತರಲ್ಲಿ ಮಂಗಳೂರಿನ ಮೂವರು ಹಾಗೂ ಪುತ್ತೂರಿನ ಮತ್ತೋರ್ವರು ಇದ್ದಾರೆ. ಮೃತರು 49 ವರ್ಷ ಮೇಲ್ಪಟ್ಟವರು. ಇವರೆಲ್ಲರೂ ಕೊರೋನದೊಂದಿಗೆ ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ಮಂಗಳೂರಿನ 67 ವರ್ಷದ ವೃದ್ಧನಿಗೆ ಸ್ಟ್ರೋಕ್, ನ್ಯುಮೋನಿಯ, 49 ವರ್ಷದ ಮಹಿಳೆಗೆ ಹೃದಯಸ್ತಂಭನ, ಮೂತ್ರಪಿಂಡ ಸಮಸ್ಯೆ, 61 ವರ್ಷದ ವೃದ್ಧೆಗೆ ದೀರ್ಘಕಾಲದ ಶ್ವಾಸಕೋಶ ಸಮಸ್ಯೆ, ಅಧಿಕ ರಕ್ತದೊತ್ತಡ, ಹೃದಯಸ್ತಂಭನ ಸಮಸ್ಯೆ ಹಾಗೂ ಪುತ್ತೂರಿನ 74 ವರ್ಷದ ವೃದ್ಧೆಗೆ ದೀರ್ಘಾವಧಿಯ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾದಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
237 ಮಂದಿಯಲ್ಲಿ ಸೋಂಕು ದೃಢ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 300 ಗಡಿದಾಟಿದ್ದ ಸೋಂಕಿತರ ಸಂಖ್ಯೆ, ಶನಿವಾರ 237 ಮಂದಿಗೆ ಪಾಸಿಟಿವ್ ವರದಿ ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,311ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಪತ್ತೆಯಾದ ಪ್ರಕರಣಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ (ಸಾರಿ) ಮತ್ತು ಶೀತ (ಐಎಲ್‌ಐ) ಪ್ರಕರಣಗಳು ಹೆಚ್ಚಿದ್ದು, ಸೋಂಕು ಮೂಲ ಪತ್ತೆಯಾಗದ ಪ್ರಕರಣಗಳು ಕೂಡ 50ಕ್ಕೂ ಹೆಚ್ಚಿವೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದಲೂ ಅನೇಕರಿಗೆ ಸೋಂಕು ಹರಡಿದ್ದು, ಇಂಥವರ ಸಂಪರ್ಕದಲ್ಲಿರುವವರ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
109 ಗುಣಮುಖ: ಆಶಾದಾಯಕ ಬೆಳವಣಿಗೆಯಲ್ಲಿ ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 109 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 1387ಕ್ಕೆ ಏರಿದೆ. 1,848 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.