ವುಹಾನ್ ವೈರಾಣು ಲ್ಯಾಬ್ ನಲ್ಲಿ ನುರಿತ ತಜ್ಞರ ಕೊರತೆ: 2018ರಲ್ಲಿ ಮಾಹಿತಿ ಪಡೆದಿದ್ದ ಅಮೆರಿಕ

Update: 2020-07-18 18:00 GMT

ವಾಶಿಂಗ್ಟನ್,ಜು.18: ಕೊರೋನ ವೈರಸ್ ಸೋಂಕಿನ ಉಗಮಸ್ಥಾನವಾದ ವುಹಾನ್ ನಗರದಲ್ಲಿರುವ ವೈರಾಣು ಪ್ರಯೋಗಾಲಯದಲ್ಲಿ ಸಮರ್ಪಕವಾಗಿ ತರಬೇತುಗೊಂಡ ಸಿಬ್ಬಂದಿಯ ಕೊರತೆಯಿರುವ ಬಗ್ಗೆ ಚೀನಾದಲ್ಲಿನ ಅಮೆರಿಕದ ರಾಯಭಾರಿ ಕಚೇರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿರುವ ಕುರಿತಾದ 2018ರ ದಾಖಲೆಗಳನ್ನು ಅಮೆರಿಕದ ವಿದೇಶಾಂಗ ಇಲಾಖೆ ಶುಕ್ರವಾರ ಬಿಡುಗಡೆಗೊಳಿಸಿದೆ.

ವುಹಾನ್ ವೈರಾಣು ಸಂಶೋಧನಾಲಯದಲ್ಲಿ ಉಂಟಾದ ಆಕಸ್ಮಿಕದಿಂದಾಗಿ ಕೊರೋನ ವೈರಸ್ ಸೋಂಕು ಹರಡಿರಬಹುದೆಂಬ ಅಮೆರಿಕದ ಅಧಿಕಾರಿಳು ಸಂದೇಹವನ್ನು ವ್ಯಕ್ತಪಡಿಸಿರುವ ನಡುವೆಯೇ, ಸೋರಿಕೆಯಾದ ದಾಖಲೆಗಳು ಮತ್ತೆ ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
 ಈ ದಾಖಲೆಗಳನ್ನು ಅಮೆರಿಕ ವಿದೇಶಾಂಗ ಇಲಾಖೆಯು ಈ ವಾರಾಂತ್ಯದವರೆಗೂ ಬಿಡುಗಡೆಗೊಳಿಸಿರಲಿಲ್ಲ. ಆದರೆ ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯು ಮಾಹಿತಿ ಸ್ವಾತಂತ್ರ ಕಾಯ್ದೆಯಡಿ ಅರ್ಜಿ ಸಲ್ಲಿಸಿ ದಾಖಲೆಗಳ ವಿವರಗಳನ್ನು ಪಡೆದುಕೊಂಡಿತ್ತು.
ವುಹಾನ್ನಲ್ಲಿ ಸಂಭವಿಸಿದ ಆಕಸ್ಮಿಕದಿಂದಾಗಿ ವೈರಸ್ ಹೊರಗೆ ಬಂದಿದೆಯೆಂಬುದನ್ನು ಈ ದಾಖಲೆಗಳು ದೃಢಪಡಿಸುವುದಿಲ್ಲವಾದರೂ, ಹಾಗಾಗಿರುವ ಸಾಧ್ಯತೆಯನ್ನು ಕೂಡಾ ಅಲ್ಲಗಳೆಯುವುದಿಲ್ಲವೆಂದು ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
   2018ರಲ್ಲಿ ಅಮೆರಿಕದ ಅಧಿಕಾರಿಗಳು ವುಹಾನ್ನ ವೈರಾಣು ಪ್ರಯೋಗಾಲಯಕ್ಕೆ ಭೇಟಿ ನೀಡಿದ್ದರು. ಅತ್ಯಂತ ನಿರ್ಬಂಧಿತವಾದ ಈ ಪ್ರಯೋಗಾಲಯವನ್ನು ಸುರಕ್ಷಿತವಾಗಿ ನಿರ್ವಹಿಸಲು ಸಮರ್ಪಕವಾಗಿ ತರಬೇತುಗೊಂಡ ತಂತ್ರಜ್ಞರು ಹಾಗೂ ತನಿಖಾಧಿಕಾರಿಗಳ ಕೊರತೆಯಿರುವುದನ್ನು ಅಮೆರಿಕದ ಅಧಿಕಾರಿಗಳು ಮನಗಂಡಿದ್ದರೆಂದು ದಾಖಲೆಗಳು ಬಹಿರಂಗಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News