ಕೊರೋನ ನಿಯಂತ್ರಣದಲ್ಲಿ ವೈಫಲ್ಯಕ್ಕೆ ಸರಕಾರದ ಏಕಪಕ್ಷೀಯ, ಅಪ್ರಬುದ್ದ ಧೋರಣೆಯೇ ಕಾರಣ: ವೆಲ್ಪೇರ್ ಪಾರ್ಟಿ
ಮಂಗಳೂರು, ಜು.19: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಸಾಕಷ್ಟು ಮುಂಜಾಗ್ರತೆಗಳನ್ನು, ಸಮರ್ಪಕವಾಗಿ ಕೈಗೊಳ್ಳದ ಕಾರಣದಿಂದಲೇ ಇಂದು ಇದು ಕೈಮೀರಿ ಹೋಗುವ ಹಂತಕ್ಕೆ ತಲುಪಿದೆ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕೊರೋನ ವೈರಸ್ ಜಿಲ್ಲೆಯಲ್ಲಿ ವ್ಯಾಪಿಸುವ ಮೊದಲೇ ಅಂದರೆ ಪ್ರಥಮ ಲಾಕ್ ಡೌನ್ ಆರಂಭದಲ್ಲೇ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕೆಲವು ನಿರ್ದೇಶನಗಳನ್ನು ನೀಡಿತ್ತು. ಆದರೆ ಅವೆಲ್ಲವನ್ನೂ ಅಂದು ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷಿಸಿತು ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ದ. ಕ. ಜಿಲ್ಲಾ ಅಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ. ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿ ಬಂಟ್ವಾಳದ ಪ್ರಥಮ ಪ್ರಕರಣ ವರದಿಯಾದಗಲೇ, ಜಿಲ್ಲಾಡಳಿತ ತುರ್ತಾಗಿ ಪ್ರತಿ ತಾಲೂಕು ಮಟ್ಟದಲ್ಲಿ ಕೊರೋನ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿ, ಕೇವಲ ರೋಗ ಲಕ್ಷಣಗಳನ್ನು ಹೊಂದಿರುವ ಜನಗಳಿಗೆ ಮಾತ್ರವಲ್ಲದೆ ಅವರ ಸಂಪರ್ಕವನ್ನು ಹೊಂದಿರುವ ಸರ್ವರಿಗೂ ಉಚಿತ ಪರೀಕ್ಷಾ ಸೌಲಭ್ಯವನ್ನು ಕಲ್ಪಿಸುವಂತೆ ವೆಲ್ಪೇರ್ ಪಾರ್ಟಿ ಜಿಲ್ಲಾಡಳಿತವನ್ನು ಒತ್ತಾಯಿಸಿತ್ತು. ಆದರೆ ಇದನ್ನು ವಿಳಂಬ ನೀತಿ ಅನುಸರಿಸುವ ಮೂಲಕ ಜಿಲ್ಲಾಡಳಿತ ನಿಷ್ಕ್ರಿಯ ಸ್ಪಂದನೆ ವ್ಯಕ್ತಪಡಿಸಿತು. ಆದ್ದರಿಂದ ಇನ್ನಾದರೂ ಸರ್ಕಾರ ತಕ್ಷಣ ಗಮನಹರಿಸಿ ಪ್ರಸಕ್ತವಾಗಿ ಕೊರೋನ ಕ್ಷಿಪ್ರಗತಿಯಲ್ಲಿನ ಬೆಳವಣಿಗೆಗೆ ತಡೆಯಲ್ಪಡುವ ಯೋಜನೆಯ ಬಗ್ಗೆ ಹೆಚ್ಚು ಮುತುವರ್ಜಿವಹಿಸಿ ಇದು ಪಸರಿಸುವ ವೇಗದ ನಿಯಂತ್ರಣಕ್ಕೆ ಸಜ್ಜಾಗಬೇಕು ಮತ್ತು ತನ್ಮೂಲಕ ಸಮೂಹ ಹರಡುವಿಕೆಗೆ ತಲುಪದಂತೆ ಜಾಗೃತರಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊರೋನ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳು ಮಾಡುವ ಲೂಟಿಯ ಕಡಿವಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಕಟಿಬದ್ದತೆಯನ್ನು ತೋರಬೇಕು ಮತ್ತು ಈಗಾಗಲೇ ಸರಕಾರ ನೀಡಿರುವ ಸುತ್ತೋಲೆಯಂತೆ, ಕೊರೋನ ಪೀಡಿತರಿಗೆ ಉಚಿತ ಸೇವೆಯನ್ನು ಒದಗಿಸುವ ಖಾಸಗಿ ಆಸ್ಪತ್ರೆಗಳ ಪಟ್ಟಿಯಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಜನರಿಗೆ ಸರಿಯಾದ ರೀತಿಯಲ್ಲಿ ಉಚಿತ ಶುಶ್ರೂಷೆ ದೊರೆಯುತ್ತಿದೆಯೇ ಎಂಬುವುದನ್ನು ಖಾತ್ರಿಪಡಿಸಿಕೊಳ್ಳಲು ಅಧಿಕಾರಿಗಳನ್ನು ನೇಮಿಸಬೇಕು ಎಂದು ಸುಲೈಮಾನ್ ಕಲ್ಲರ್ಪೆ ಪ್ರಕಟನೆಯ ಮೂಲಕ ಆಗ್ರಹಿಸಿದ್ದಾರೆ.