ಪ್ರಯೋಗಾಲಯದ ವರದಿಯಲ್ಲಿ ಕೋವಿಡ್ ನೆಗೆಟಿವ್, ಆರೋಗ್ಯ ಇಲಾಖೆಯ ವರದಿಯಲ್ಲಿ ಪಾಸಿಟಿವ್ !
ಮಂಗಳೂರು, ಜು.19: ಸೌದಿ ಅರೇಬಿಯಾದಿಂದ ತವರೂರಿಗೆ ಆಗಮಿಸಿದ ಮಹಿಳೆಯೊಬ್ಬರ ಕೋವಿಡ್ -19 ಪರೀಕ್ಷಾ ವರದಿ ಗೊಂದಲಕ್ಕೆ ಎಡೆಮಾಡಿ ಕೊಟ್ಟಿದ್ದು, ಮನೆಮಂದಿಯಲ್ಲಿ ಆತಂಕ ಮೂಡಿಸಿದ ಘಟನೆ ಬೆಳಕಿಗೆ ಬಂದಿವೆ.
ಅಡ್ಯಾರ್ ಗ್ರಾಪಂ ವ್ಯಾಪ್ತಿಯ ವಳಚ್ಚಿಲ್ ಪದವು ನಿವಾಸಿ ಸುಮಾರು 30 ವರ್ಷ ಪ್ರಾಯದ 6 ತಿಂಗಳ ಗರ್ಭಿಣಿಯು ಸೌದಿ ಅರೇಬಿಯಾದಲ್ಲಿ ಪತಿಯೊಂದಿಗೆ ವಾಸವಾಗಿದ್ದರು. ಜು.14ರಂದು ಈ ಮಹಿಳೆಯು ತನ್ನ 2 ವರ್ಷ ಪ್ರಾಯದ ಮಗನ ಜೊತೆಗೆ ಸೌದಿ ಅರೇಬಿಯಾದಿಂದ ಊರಿಗೆ ಬಂದಿದ್ದರು. ಹಾಗೇ ನಗರದ ಲಾಡ್ಜ್‌ವೊಂದರಲ್ಲಿ ಕ್ವಾರಂಟೈನ್‌ಗೊಳಗಾಗಿದ್ದರು. ಜು.15ರಂದು ತಾಯಿ ಮತ್ತು ಮಗನ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಾಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ವರದಿಯ ನಿರೀಕ್ಷೆಯಲ್ಲಿರುವಾಗಲೇ ಜು.18ರಂದು ಬೆಳಗ್ಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ, ಅಡ್ಯಾರ್ ಗ್ರಾಪಂ ಗ್ರಾಮ ಕರಣಿಕರು ಮತ್ತು ಮಂಗಳೂರು ತಾಲೂಕು ಆರೋಗ್ಯ ಕೇಂದ್ರದಿಂದ ಗರ್ಭಿಣಿಗೆ ಬಂದ ಪ್ರತ್ಯೇಕ ಫೋನ್ ಕರೆಗಳಲ್ಲಿ "ನಿಮಗೆ ಕೊರೋನ ಪಾಸಿಟಿವ್ ಇದೆ" ಎಂದು ತಿಳಿಸಲಾಗಿದೆ. ಈ ಕರೆಯಿಂದ ಮಹಿಳೆಯು ತೀವ್ರ ಆತಂಕಿತರಾಗಿದ್ದಾರೆ. ಅನ್ನ, ನೀರು ಮುಟ್ಟದೆ ಕಂಗಾಲಾಗಿದ್ದಾರೆ. ಆದರೆ ಸಂಜೆ ಕೈಸೇರಿದ ಪ್ರಾಯೋಗಾಲಯದ ಇವರ ವರದಿಯಲ್ಲಿ ನೆಗೆಟಿವ್ ಬಂದಿವೆ. ಈ ಗೊಂದಲದಿಂದ ಈ ಮಹಿಳೆ ಮತ್ತವರ ಮನೆಯವರು ಆತಂಕಿತರಾಗಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆಯು ಶನಿವಾರ ಬಿಡುಗಡೆಗೊಳಿಸಲಾದ ಬುಲೆಟಿನ್‌ನಲ್ಲಿ ಈ ಮಹಿಳೆಗೆ ಪಾಸಿಟಿವ್ ಎಂದು ಉಲ್ಲೇಖಿಸಲಾಗಿದೆ. ಆದರೆ ಶನಿವಾರ ಬಂದ ಪ್ರಾಯೋಗಾಲಯದ ವರದಿಯಲ್ಲಿ ನೆಗೆಟಿವ್ ಎಂದು ತೋರಿಸಲಾಗಿದೆ. ಹಾಗಿದ್ದರೆ ಯಾವುದು ಸರಿ ಎಂಬ ಪ್ರಶ್ನೆ ಇದೀಗ ಈ ಮಹಿಳೆ ಮತ್ತವರ ಮನೆಯವರನ್ನು ಕಾಡುತ್ತಿವೆ. ಯಾರ ಮಾತನ್ನು ನಂಬಬೇಕು ಎಂದು ತಿಳಿಯಲಾಗದೆ ಗೊಂದಲಕ್ಕೆ ಸಿಲುಕಿದ್ದಾರೆ.
ಈ ಬಗ್ಗೆ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಮಹಿಳೆಯ ಸಹೋದರ ಮುಹಮ್ಮದ್ ಇಕ್ಬಾಲ್, "ಆರೋಗ್ಯ ಇಲಾಖೆಯ ಎಡವಟ್ಟಿನಿಂದ ನಾವು ಗೊಂದಲಕ್ಕೆ ಸಿಲುಕಿದ್ದೇವೆ ಮತ್ತು ಕಂಗಾಲಾಗಿದ್ದೇವೆ. ಒಂದೆಡೆ ಪಾಸಿಟಿವ್ ಮತ್ತು ಇನ್ನೊಂದೆಡೆ ನೆಗೆಟಿವ್ ವರದಿ ಬಂದಿದೆ. ಈ ವರದಿಯ ಪೈಕಿ ನಾವು ಯಾವುದನ್ನು ಸ್ವೀಕರಿಸಬೇಕು ಎಂದು ಗೊತ್ತಾಗುತ್ತಿಲ್ಲ. ನಮಗೆ ಸ್ಪಷ್ಟವಾದ ವರದಿ ನೀಡಿದರೆ ನಾವು ಇಂತಹ ಗೊಂದಲಕ್ಕೆ ಸಿಲುಕಬೇಕಾಗಿರಲಿಲ್ಲ. ನಾವೀಗ ಅಡಕತ್ತರಿಯಲ್ಲಿ ಸಿಲುಕಿದ್ದೇವೆ. ಸತ್ಯಾಂಶ ಏನು ಎಂಬುದನ್ನು ಆರೋಗ್ಯ ಇಲಾಖೆಯೇ ಸ್ಪಷ್ಟಪಡಿಸಬೇಕು’’ ಎಂದು ಮನವಿ ಮಾಡಿದ್ದಾರೆ.
"ಇದರಲ್ಲಿ ನಮ್ಮದೇನೂ ತಪ್ಪಿಲ್ಲ. ಆರೋಗ್ಯ ಇಲಾಖೆ ಹೊರಡಿಸಿದ ಬುಲೆಟಿನ್ ವರದಿಯ ಆಧಾರದಲ್ಲಿ ನಾವು ಆ ಮನೆಯನ್ನು ಸೀಲ್ ಮಾಡಲು ಮುಂದಾಗಿದ್ದೆವು. ಆದರೆ ಅವರು ವಿದೇಶದಿಂದ ಬಂದ ಪ್ರಯಾಣಿಕರು ಮತ್ತು ಮಂಗಳೂರಿನಲ್ಲೇ ಕ್ವಾರಂಟೈನ್‌ನಲ್ಲಿರುವುದರಿಂದ ಮನೆಯನ್ನು ಸೀಲ್‌ಡೌನ್ ಮಾಡುವ ನಿರ್ಧಾರ ಕೈ ಬಿಟ್ಟಿದ್ದೇವೆ. ಅವರಿಗೆ ನೆಗೆಟಿವ್ ಬಂದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ.ಇನ್ನೇನಿದ್ದರೂ ವಾಸ್ತವಾಂಶ ಮೇಲಧಿಕಾರಿಯ ಗಮನಕ್ಕೆ ತರಲಾಗುವುದು’’ ಎಂದು ಅಡ್ಯಾರ್ ಗ್ರಾಪಂ ಗ್ರಾಮಕರಣಿಕರು ತಿಳಿಸಿದ್ದಾರೆ.