ಬೆಟ್ಟಂಪಾಡಿಯಲ್ಲಿ ಕಡಲ್ಕೊರೆತ: ಅಪಾಯದಂಚಿನಲ್ಲಿ ಕೆಲವು ಮನೆಗಳು

Update: 2020-07-19 12:11 GMT

ಉಳ್ಳಾಲ,ಜು.19: ಕೆಲವು ದಿನಗಳಿಂದ ಎಡೆಬಿಡದೆ ಬರುತ್ತಿರುವ ಭಾರೀ ಮಳೆಯಿಂದ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲ ಬೆಟ್ಟಂಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಇದರಿಂದ ತಡೆಗೋಡೆ ಕಲ್ಲುಗಳು, ಬೆಟ್ಟಂಪಾಡಿ ರಸ್ತೆ, ತೆಂಗಿನ ಮರ ಸಮುದ್ರ ಪಾಲಾಗುತ್ತಿದ್ದು, ಕೆಲವು ಮನೆಗಳು ಅಪಾಯ ದಂಚಿನಲ್ಲಿದೆ. ಈ ಪೈಕಿ ಒಂದು ಮನೆಗೆ ಭಾಗಶಃ ಹಾನಿ ಆಗಿದೆ.  ಈ ಮನೆಯಲ್ಲಿ ವಾಸವಿದ್ದ ರಾಜೀವಿ ಎಂಬವರ ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿದೆ. ನಿನ್ನೆ ರಾತ್ರಿಯಿಂದ ಕಡಲಿನ ಅಲೆ ನಿರಂತರ ಬೀಸಲಾರಂಭಿಸಿದ ಪರಿಣಾಮ ರಸ್ತೆ ಸಮುದ್ರ ಪಾಲಾಗುತ್ತಿದ್ದು ಇಲ್ಲಿನ ನಿವಾಸಿಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಈ ಬೆಟ್ಟಂಪಾಡಿ ಪ್ರದೇಶದಲ್ಲಿ ಎಂಟು ಮನೆಗಳು ಇದ್ದು, ಕಡಲ್ಕೊರೆತ ತೀವ್ರಗೊಂಡರೆ ಎಲ್ಲ ಮನೆಗಳಿಗೂ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಆದರೆ ಅವರಿಗಾಗಿ ಬೋವಿ ಶಾಲೆಯಲ್ಲಿ ಗಂಜಿ ಕೇಂದ್ರ ‌ವ್ಯವಸ್ಥೆಯನ್ನು ಪುರಸಭೆ ಮಾಡಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಗುರುಪ್ರಸಾದ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ, ಗ್ರಾಮಕರಣಿಕ ಲಾವಣ್ಯ, ಕಂದಾಯ ನಿರೀಕ್ಷಕ ಸ್ಟೀವನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಡಲ್ಕೊರೆತದಲ್ಲೂ ರಾಜಕೀಯ ಮಾಡಿದರು: ಶಾಸಕ ಖಾದರ್ 
ಕಡಲ್ಕೊರೆತ ಪ್ರದೇಶಗಳಿಗೆ ಉಸ್ತುವಾರಿ ಸಚಿವರು ಭೇಟಿ ನೀಡುವ ಸಂದರ್ಭದಲ್ಲಿ ನನಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಲ್ಲೂ ಕೂಡಾ ಅವರು ರಾಜಕೀಯ ಮಾಡಲು ಹೊರಟರು. ನಮಗೆ ರಾಜಕೀಯ ಬೇಕಾಗಿಲ್ಲ, ಸಮಸ್ಯೆ ಇತ್ಯರ್ಥ ಆಗಬೇಕು. ಬೆಟ್ಟಂಪಾಡಿಯ ಸಮಸ್ಯೆ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆದಿದ್ದೇನೆ. ಆದರೆ ಅವರು ಸ್ಪಂದಿಸಲಿಲ್ಲ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News