×
Ad

ಅಪಘಾತದಲ್ಲಿ ಕಾಲಿಗೆ ಗಂಭೀರ ಗಾಯ: ಕೊರೋನ ಸೋಂಕಿತನಿಗೆ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆ; ಆರೋಪ

Update: 2020-07-19 19:47 IST

ಮಂಗಳೂರು, ಜು.19: ನೀರುಮಾರ್ಗ ಸಮೀಪದ ಪಡು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡದ ಆರೋಪವು ನಗರದ ಖಾಸಗಿ ಆಸ್ಪತ್ರೆಯ ವಿರುದ್ಧ ಕೇಳಿಬಂದಿದೆ.

ಅಪಘಾತದಲ್ಲಿ ಬಲಗಾಲಿಗೆ ಗಂಭೀರ ಗಾಯವಾಗಿ ತೀವ್ರ ನೋವಿನಿಂದ ಬಳಲುತ್ತಿದ್ದ ಕೋವಿಡ್-19 ಸೋಂಕಿತನಿಗೆ ಶಸ್ತ್ರಚಿಕಿತ್ಸೆ ಹಾಗೂ ನೋವು ಪರಿಶಮನಕ್ಕೆ ಆಸ್ಪತ್ರೆಯು ಮುಂದಾಗಲಿಲ್ಲ ಎನ್ನುವ ಆಪಾದನೆಯು ಖಾಸಗಿ ಆಸ್ಪತ್ರೆ ವಿರುದ್ಧ ವ್ಯಕ್ತವಾಗಿದೆ. ಅಲ್ಲದೆ, ಸಂತ್ರಸ್ತನಿಂದ ಸಾವಿರಾರು ರೂ. ಬಿಲ್ ಪಡೆದ ಬಳಿಕವೂ ಚಿಕಿತ್ಸೆ ನೀಡಲಿಲ್ಲ ಎಂದೂ ಸಂತ್ರಸ್ತ ತನ್ನ ಆಕ್ರೋಶ ಹೊರಹಾಕಿದ್ದಾರೆ.

ಮಲ್ಲೂರು ನಿವಾಸಿ ಸಿರಾಜ್ (26) ಆಟೊರಿಕ್ಷಾ ಚಾಲಕ. ಈತ ಜು.15ರಂದು ನೀರುಮಾರ್ಗದ ತನ್ನ ಮನೆಯತ್ತ ವಾಪಸಾಗುತ್ತಿದ್ದಾಗ ಪಡು ಸಮೀಪದ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಬಲಗಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತು.

''ಆಸ್ಪತ್ರೆಯಲ್ಲಿ ತನಗೆ ಚಿಕಿತ್ಸೆ ನೀಡುವ ಮೊದಲೇ ವೈದ್ಯರು ಗಂಟಲುದ್ರವ ಮಾದರಿ ಸಂಗ್ರಹಿಸಿದ್ದರು. ಎರಡು ದಿನಗಳ ಬಳಿಕ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದರು. ಜು.17ರಂದು ಕೊರೋನ ಸೋಂಕು ದೃಢಗೊಂಡ ವರದಿ ಬಂತು. ಕೊರೋನದಿಂದ ಗುಣಮುಖರಾದ ಬಳಿಕವೇ ಶಸ್ತ್ರಚಿಕಿತ್ಸೆ ನೀಡುವುದಾಗಿ ಹೇಳಿದರು. ಆದರೆ ಕಾಲುನೋವು ತೀರಾ ಉಲ್ಬಣಿಸಿದರೂ ಚಿಕಿತ್ಸೆ ನೀಡಲಿಲ್ಲ'' ಎಂದು ಸಿರಾಜ್ ಮಲ್ಲೂರು ಆರೋಪಿಸಿದ್ದಾರೆ.

''ಕಾಲುನೋವು ಇನ್ನಿಲ್ಲದಂತೆ ಒಳಭಾಗದಿಂದ ಸೆಳೆಯುತ್ತಿದೆ. ಸತ್ತು ಹೋಗುವಷ್ಟು ಯಾತನೆ ಪಡುತ್ತಿದ್ದೇನೆ. ಬದುಕುಳಿಯುವ ಆಶಾಭಾವನೆಯೇ ಇಲ್ಲದಂತಾಗಿದೆ. ಶೌಚಕ್ಕೆ ತೆರಳುವುದೂ ಕಷ್ಟಸಾಧ್ಯ. ರಾತ್ರಿ ನಿದ್ದೆಯಂತೂ ಮೊದಲೇ ಬರುತ್ತಿಲ್ಲ. ಕೂಡಲೇ ಚಿಕಿತ್ಸೆ ನೀಡಿ ಎಂದು ಬೇಡಿಕೊಂಡರೂ ಶಸ್ತ್ರಚಿಕಿತ್ಸೆಗೆ ಸ್ಪಂದಿಸಲಿಲ್ಲ. ವೆನ್ಲಾಕ್‌ಗೆ ಸ್ಥಳಾಂತರಿಸುವಂತೆ ಕೇಳಿದ ಮೇಲೆ ಅವಕಾಶ ಕೊಟ್ಟರು. ಆದಾಗ್ಯೂ ತನ್ನಿಂದ 23 ಸಾವಿರ ರೂ. ಬಿಲ್ ಪಡೆದಿದ್ದಾರೆ'' ಎಂದು ಅವರು ಆರೋಪಿಸಿದ್ದಾರೆ.

''ಜು.17ರಂದೇ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾದೆ. ಅಲ್ಲಿನ ವೈದ್ಯರು ಕಾಲುನೋವು ಪರಿಶಮನಕ್ಕೆ ಚುಚ್ಚುಮದ್ದು ನೀಡಿದ್ದಾರೆ. ಕಾಲಿಗೆ 'ಸಿಮೆಂಟ್ ಪ್ಲಾಸ್ಟರಿಂಗ್' ಮಾಡಿದ್ದು, ಸದ್ಯಕ್ಕೆ ನೋವು ಕಡಿಮೆಯಾಗಿದೆ. 10 ದಿನ ಕೊರೋನ ಚಿಕಿತ್ಸೆ ಮುಂದುವರಿಯಲಿದ್ದು, ಬಳಿಕ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದ್ದಾರೆ'' ಎಂದು ಸಿರಾಜ್ ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಕೋವಿಡ್ ಸೋಂಕಿತನಿಗೆ 'ಕೊರೋನ ಚಿಕಿತ್ಸೆ' ಮುಂದುವರಿದಿದೆ. ಕೋವಿಡ್‌ನಿಂದ ಗುಣಮುಖರಾದ ಬಳಿಕ ಶಸ್ತ್ರಚಿಕಿತ್ಸೆ ನಡೆಯಲಿದೆ. ಅತೀ ಗಂಭೀರ ಪ್ರಕರಣದಲ್ಲಿ ಮಾತ್ರವೇ ಎಲ್ಲ ಮುಚ್ಚೆನ್ನೆರಿಕೆ ಕ್ರಮ ವಹಿಸಿ, ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

- ಡಾ.ರತ್ನಾಕರ್, ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News