ಕೊಣಾಜೆ: ಹಣ್ಣು ಹಂಪಲು ಗಿಡ ನೆಡುವ ಕಾರ್ಯಕ್ಕೆ ಚಾಲನೆ

Update: 2020-07-19 15:14 GMT

ಕೊಣಾಜೆ: ಹಸಿರು ಕ್ರಾಂತಿಗೆ ಪೂರಕವಾಗಿ ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರದ ಸಮತೋಲನಕ್ಕೆ ಕಾರ್ಯ ನಿರ್ವಹಿಸುವ ಕೆಲಸ ಆಗಬೇಕಾಗಿದ್ದು, ವಿವಿಧ ಸಂಘ ಸಂಸ್ಥೆಗಳು ಹಸೀರೀಕರಣ ಯೋಜನೆಯಲ್ಲಿ ಕೈಜೋಡಿಸುವ ಮೂಲಕ ಮಾಲಿನ್ಯಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ರಿಫಾಯಿ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಅಭಿಪ್ರಾಯಪಟ್ಟರು.

ಅವರು ಕೊಣಾಜೆ ರಿಫಾಯಿ ಜುಮಾ ಮಸ್ಜಿದ್ ಕೋಡಿಜಾಲ್ ಇದರ ಆವರಣದಲ್ಲಿ ಡಾ.ದಯಾನಂದ ಪೈ, ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ಹಸಿರು ಸೇನೆ ಆಶ್ರಯದಲ್ಲಿ ಖಿದ್ಮತ್ತುಲ್ ಇಸ್ಲಾಂ ಎಸೋಸಿಯೇಷನ್ ಕೋಡಿಜಾಲ್, ಮಾಧ್ಯಮ ಕೇಂದ್ರ ಉಳ್ಳಾಲ ಮತ್ತು ರೂಟ್ಸ್ ಇಂಡಿಯಾ ಮಂಗಳೂರು ಇದರ ಜಂಟಿ ಸಹಯೋಗದೊಂದಿಗೆ ದ.ಕ.ಜಿಲ್ಲಾ ಅರಣ್ಯ ಇಲಾಖೆ ಮತ್ತು ಪರಿಸರವಾದಿ ಮಾದವ ಉಳ್ಳಾಲ್ ಅವರ ಮಾರ್ಗದರ್ಶನದಲ್ಲಿ ನಡೆದ ಹಣ್ಣು ಹಂಪಲು ಗಿಡ ಮತ್ತು ಅರಣ್ಯ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರವಾದಿ ಮಾದವ ಉಳ್ಳಾಲ್ ಮಾತನಾಡಿ, ಇಂದಿನ ದಿನಗಳಲ್ಲಿ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯೊಂದಿಗೆ ಗಿಡ ನೆಟ್ಟು ಅದನ್ನು ಬೆಳೆಸುವ ಕಾರ್ಯ ಆಗಬೇಕು. ನೆಟ್ಟಿರುವ ಗಿಡಗಳ ರಕ್ಷಣೆಯ ಕಾರ್ಯ ಸ್ಥಳೀಯರದ್ದಾಗಿದೆ ಎಂದರು.

ಡಾ. ದಯಾನಂದ ಪೈ, ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿನ ಪ್ರಾಧ್ಯಾಪಕ ಹಾಗೂ ಹಸಿರು ಸೇನೆಯ ಸಂಯೋಜಕ ಡಾ. ನವೀನ್ ಎನ್. ಕೊಣಾಜೆ ಮಾತನಾಡಿ, ಕೊಣಾಜೆ ಪರಿಸರದಲ್ಲಿ ಈಗಾಗಲೇ ಎರಡು ವರ್ಷಗಳ ಹಿಂದೆಯೇ ಎನ್‍ಎಸ್‍ಎಸ್ ಮೂಲಕ ಹಸೀರಿಕರಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಮಸೀದಿ ಪರಿಸರದಲ್ಲಿ 150 ಗಿಡಗಳನ್ನು ನೆಡಲು ಗುಂಡಿ ತೆಗೆದಿದ್ದು ಇದರಲ್ಲಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ರಿಫಾಯಿ ಜುಮಾ ಮಸ್ಜಿದ್ ಕೋಡಿಜಾಲ್ ಇದರ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಮಸೀದಿ ಉಪಾಧ್ಯಕ್ಷ ಅಬ್ದುಲ್ ಖಾದರ್, ಖಿದ್ಮತ್ತುಲ್ ಇಸ್ಲಾಂ ಎಸೋಸಿಯೇಷನ್‍ನ ಅಧ್ಯಕ್ಷ ಅಮೀರ್ ಕೋಡಿಜಾಲ್,  ಕಾರ್ಯಕಾರಿಣಿ  ಸದಸ್ಯರಾದ ಅಶ್ರಫ್ ಶೇಖಬ್ಬ, ರೂಟ್ಸ್ ಇಂಡಿಯಾ ಪೌಂಡೇಶನ್‍ನ ಸದಸ್ಯ ಹಾಗೂ ಗಟ್ಟಿ ಸಮಾಜ ಬೆಳ್ಮ ಮಾಗಣೆ ಅಧ್ಯಕ್ಷ ಪದ್ಮನಾಭ ಗಟ್ಟಿ ಕೆಳಗಿನ ಮನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಕುಮಾರ್ ವಿಟ್ಲ, ಪ್ರಮೋದ್ ಮಂಜೇಶ್ವರ, ತುಷಾರ್ ಆಚಾರ್ಯ ಕೋಟೆಕಾರ್, ಪತ್ರಕರ್ತರಾದ ಮೋಹನ್ ಕುತ್ತಾರ್, ಆರಿಫ್ ಕಲ್ಲಟ್ಟ, ಅಶ್ವಿನ್ ಕುತ್ತಾರ್, ತೇಜೇಶ್ ಗಟ್ಟಿ  ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News