ಮಣಿಪಾಲ ಕೆಎಂಸಿಯಲ್ಲಿ ವೀಡಿಯೊ ಸಮಾಲೋಚನೆ ಸೇವಾ ಸೌಲಭ್ಯ

Update: 2020-07-19 15:39 GMT

ಮಣಿಪಾಲ, ಜು.19: ಸೋಮವಾರ (ಜು.20)ದಿಂದ ಜಾರಿಗೆ ಬರುವಂತೆ ರೋಗಿಗಳ ಅನುಕೂಲಕ್ಕಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವೀಡಿಯೋ ಸಮಾಲೋಚನಾ ಸೇವೆಯನ್ನು ಪ್ರಾರಂಭಿಸಲಿದ್ದೇವೆ ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಪ್ರಕಟಿಸಿದ್ದಾರೆ.

ನೋವೆಲ್ ಕೊರೋನ ವೈರಸ್ (ಕೋವಿಡ್-19) ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಹಲವು ನಿರ್ಬಂಧಗಳಿರುವುದರಿಂದ, ಹೆಚ್ಚಿನ ರೋಗಿಗಳು ವೈದ್ಯರೊಂದಿಗೆ ಸಮಯೋಚಿತ ಸಮಾಲೋಚನೆ ಮತ್ತು ಮರು ಸಮಾಲೋಚನೆಯಿಂದ ವಂಚಿತರಾಗಿದ್ದಾರೆ. ಆದುದರಿಂದ ಸಂಬಂಧಿತ ರೋಗಿ ಗಳಿಗೆ ಸಮಾಲೋಚನೆ ಮತ್ತು ಮರು ಸಮಾಲೋಚನೆಗೆ ನೀಡುವುದನ್ನು ವೀಡಿಯೋ ಸಮಾಲೋಚನೆ ಸೇವೆಗಳ ಮೂಲಕ ನೀಡಲು ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ ಎಂದವರು ಹೇಳಿದ್ದಾರೆ.

ತಮ್ಮ ರೋಗಿಗಳ ಉತ್ತಮ ಸೇವೆಗಾಗಿ ಮತ್ತು ಯಾವುದೇ ಸಮಯದಲ್ಲಿ, ಎಲ್ಲೇಯಾದರೂ, ಯಾವುದೇ ಸಾಧನದಲ್ಲಿ ಸಮಾಲೋಚನೆಗಳನ್ನು ಒದಗಿಸಲು ಮೈ ಟೆಲಿ ಒಪಿಡಿ ಅಥವಾ ವೀಡಿಯೋ ಸಮಾಲೋಚನೆ ಒಂದು ಪ್ರಬಲ ಸಾಧನ. ವೈದ್ಯರು ಹಾಗೂ ರೋಗಿಗಳು ಈಗ ಟೆಲಿಮೆಡಿಸಿನ್ ಅಥವಾ ವೀಡಿಯೋ ಸಮಾಲೋಚನೆಯನ್ನು ಅ್ಯಪ್ ಡೌನ್ಲೋಡ್ ಮಾಡದೆ ಬಳಸಬಹುದು. ಇದು ಎಲ್ಲಾ ಪೋನ್‌ಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತದೆ.

ಈ ಸೇವೆಯಡಿಯಲ್ಲಿ ಜನರು ತಮ್ಮ ಮನೆಯಲ್ಲಿ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ದೂರವಾಣಿ ಮೂಲಕ ಅಥವಾ ವೀಡಿಯೋ ಕರೆ ಮೂಲಕ ಸಮಾಲೋಚನೆ ಮತ್ತು ವೈದ್ಯಕೀಯ ಸಲಹೆಯನ್ನು ನೀಡಲಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9:00ರಿಂದ ಸಂಜೆ 4:00ರವರೆಗೆ ದೂರವಾಣಿ ಕರೆ ಮಾಡುವುದರ ಮೂಲಕ ಎಲ್ಲಾ ವಿಭಾಗದ ವೈದ್ಯರನ್ನು ಸಂಪರ್ಕಿಸಬಹುದು. ಸಂಪರ್ಕಿಸಲು 080-47192235ಗೆ ಕರೆ ಮಾಡಬಹುದು ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News