ಮಧ್ಯಪ್ರದೇಶ: ಪೊಲೀಸರಿಂದ ಲಕೋಟೆ ಪಡೆದ ವೀಡಿಯೊ ವೈರಲ್; ಸಾರಿಗೆ ಆಯುಕ್ತರ ವರ್ಗಾವಣೆ

Update: 2020-07-19 17:50 GMT

ಭೋಪಾಲ್, ಜು.19: ಮಧ್ಯಪ್ರದೇಶದ ಸಾರಿಗೆ ಆಯುಕ್ತ ವಿ. ಮಧುಕುಮಾರ್ ಪೊಲೀಸ್ ಸಿಬ್ಬಂದಿಯಿಂದ ಲಕೋಟೆಯೊಂದನ್ನು ಸ್ವೀಕರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ವರ್ಗಾಯಿಸಲಾಗಿದೆ ಎಂದು ರಾಜ್ಯದ ಗೃಹ ಇಲಾಖೆ ತಿಳಿಸಿದೆ.

ಮಧು ಕುಮಾರ್ ಉಜ್ಜೈನ್ ವಲಯದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸಂದರ್ಭದ ವೀಡಿಯೊ ಇದಾಗಿದೆ. ಅವರು ಪೊಲೀಸ್ ಸಿಬ್ಬಂದಿಯಿಂದ ಲಕೋಟೆ ಪಡೆಯುತ್ತಿರುವುದು ವೀಡಿಯೋದಲ್ಲಿ ಕಾಣಬಹುದು. ಆದರೆ ಲಕೋಟೆಯಲ್ಲಿ ಏನಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯದ ಸಾರಿಗೆ ಸಚಿವ ಗೋವಿಂದ್ ಸಿಂಗ್ ರಜಪೂತ್ ಹೇಳಿದ್ದಾರೆ.

ಶನಿವಾರ ವೀಡಿಯೊ ವೈರಲ್ ಆದ ಬಳಿಕ ಮಧುಕುಮಾರ್ ರನ್ನು ಸಾರಿಗೆ ಆಯುಕ್ತ ಹುದ್ದೆಯಿಂದ ವರ್ಗಾಯಿಸಿ, ಮುಂದಿನ ಆದೇಶದವರೆಗೆ ಭೋಪಾಲದ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಗೃಹ ಇಲಾಖೆಯ ಆದೇಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News