×
Ad

ಯುಎಇಯ ಮೊದಲ ಮಂಗಳ ಮಿಶನ್ 'ಹೋಪ್' ಯಶಸ್ವಿ ಉಡಾವಣೆ

Update: 2020-07-20 11:21 IST

ಟೋಕಿಯೊ (ಜಪಾನ್), ಜು. 20: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮಂಗಳ ಗ್ರಹ ಶೋಧಕ ನೌಕೆ ‘ಹೋಪ್’ನ್ನು ಹೊತ್ತ ರಾಕೆಟನ್ನು ಸೋಮವಾರ ಜಪಾನ್‌ನಿಂದ ಯಶಸ್ವಿಯಾಗಿ ಉಡಾಯಿಸಲಾಗಿದೆ. ಇದು ಅರಬ್ ದೇಶವೊಂದರ ಮೊದಲ ಮಂಗಳ ಗ್ರಹ ಶೋಧಕ ನೌಕೆಯಾಗಿದೆ.

ಮಂಗಳ ಗ್ರಹದ ವಾತಾವರಣದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದಕ್ಕಾಗಿ ಯುಎಇ ಅಭಿವೃದ್ಧಿಪಡಿಸಿರುವ ಶೋಧಕ ನೌಕೆಯನ್ನು ಹೊತ್ತ ಜಪಾನ್‌ನ ರಾಕೆಟ್ ದಕ್ಷಿಣ ಜಪಾನ್‌ನ ಟನೆಗಶಿಮ ಬಾಹ್ಯಾಕಾಶ ಕೇಂದ್ರದಿಂದ ಸ್ಥಳೀಯ ಸಮಯ ಬೆಳಗ್ಗೆ 6:58ಕ್ಕೆ (ಭಾರತೀಯ ಕಾಲಮಾನ ಮುಂಜಾನೆ 3:28) ನಭಕ್ಕೆ ಚಿಮ್ಮಿತು.

ಅರೇಬಿಕ್ ಭಾಷೆಯಲ್ಲಿ ‘ಅಲ್-ಅಮಲ್’ ಎಂದು ಕರೆಯಲ್ಪಡುವ ಶೋಧ ನೌಕೆಯ ಉಡಾವಣೆಯನ್ನು ಇದಕ್ಕೂ ಮೊದಲು ಕೆಟ್ಟ ಹವಾಮಾನದಿಂದಾಗಿ ಎರಡು ಬಾರಿ ಮುಂದೂಡಲಾಗಿತ್ತು.

ಉಡಾವಣೆಯ ಒಂದು ಗಂಟೆ ಬಳಿಕ, ನೌಕೆಯು ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು. ಆಗ ಜಪಾನ್ ನಿಯಂತ್ರಣ ಕೊಠಡಿಯಲ್ಲಿದ್ದ ವಿಜ್ಞಾನಿಗಳು ಚಪ್ಪಾಳೆ ತಟ್ಟುತ್ತಾ ಸಂಭ್ರಮಾಚರಿಸುವುದು ಕಂಡುಬಂತು.

‘‘ರಾಕೆಟ್ ಹಾರಾಟದ ಮಾರ್ಗವನ್ನು ನಿಖರವಾಗಿ ಅನುಸರಿಸಲಾಗಿದೆ ಹಾಗೂ ನಿಗದಿಯಾದಂತೆ ‘ಹೋಪ್’ ಶೋಧ ನೌಕೆಯು ರಾಕೆಟ್‌ನಿಂದ ಬೇರ್ಪಟ್ಟಿದೆ’’ ಎಂದು ರಾಕೆಟ್ ನಿರ್ಮಾಣ ಸಂಸ್ಥೆ ಮಿತ್ಸುಬಿಶಿ ಹೆವಿ ಇಂಡಸ್ಟ್ರೀಸ್ ತಿಳಿಸಿದೆ.

2021ರ ಸೆಪ್ಟಂಬರ್‌ನಲ್ಲಿ ‘ಹೋಪ್’ ಮಂಗಳ ಗ್ರಹದ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

► ಭೂಮಿಯ ಸುತ್ತ ಯುಎಇಯ 9 ಉಪಗ್ರಹಗಳು

ಯುಎಇಯ ಒಂಬತ್ತು ಉಪಗ್ರಹಗಳು ಈಗಾಗಲೇ ಭೂಮಿಯ ಸುತ್ತ ತಿರುಗುತ್ತಿವೆ. ಮುಂದಿನ ವರ್ಷಗಳಲ್ಲಿ ಇನ್ನೂ ಎಂಟು ಉಪಗ್ರಹಗಳನ್ನು ಉಡಾಯಿಸುವ ಗುರಿಯನ್ನು ಅದು ಹೊಂದಿದೆ.

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಯುಎಇಯ ಮೊದಲ ಗಗನಯಾನಿ ಬಾಹ್ಯಾಕಾಶ ಯಾನ ಕೈಗೊಂಡಿದ್ದು, ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದಾರೆ.

► ‘ಬುರ್ಜ್ ಖಲೀಫ’ದಲ್ಲಿ ಬೆಳಕಿನ ಚಿತ್ತಾರ

ಮಂಗಳ ಗ್ರಹ ಶೋಧ ನೌಕೆ ‘ಹೋಪ್’ನ ಯಶಸ್ವಿ ಉಡಾವಣೆಯನ್ನು ದುಬೈಯಲ್ಲಿ ಭರ್ಜರಿಯಾಗಿ ಆಚರಿಸಲಾಗಿದೆ. ಜಗತ್ತಿನ ಅತಿ ಎತ್ತರದ ಗಗನಚುಂಬಿ ಕಟ್ಟಡ ‘ಬುರ್ಜ್ ಖಲೀಫ’ವನ್ನು ಉಡಾವಣೆಗಿಂತ ಗಂಟೆಗಳ ಮೊದಲೇ ಬೆಳಕಿನಿಂದ ಸಿಂಗರಿಸಲಾಗಿತ್ತು. ಹಾಗೂ ಜಪಾನ್‌ನಲ್ಲಿ ಉಡಾವಣೆಯ ಸಮಯಕ್ಕೆ ಹೊಂದಿಕೊಳ್ಳುವಂತೆ, ಕಟ್ಟಡದಲ್ಲಿ 10 ಸೆಕೆಂಡ್‌ಗಳ ಕೌಂಟ್‌ಡೌನ್‌ನ್ನೂ ತೋರಿಸಲಾಗಿತ್ತು.

‘‘ಈ ಬಾಹ್ಯಾಕಾಶ ಯೋಜನೆಯು ಯುಎಇ ಮತ್ತು ವಲಯದ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ’’ ಎಂದು ಯುಎಇಯ ಮುಹಮ್ಮದ್ ಬಿನ್ ರಶೀದ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಯೂಸುಫ್ ಹಾಮದ್ ಅಲ್-ಶೈಬಾನಿ ಉಡಾವಣೆಯ ಬಳಿಕ ಜಪಾನ್‌ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

► ಮಂಗಳನ ಮೇಲೆ ಇಳಿಯುವುದಿಲ್ಲ

2021 ಫೆಬ್ರವರಿ ವೇಳೆಗೆ ‘ಹೋಪ್’ ಶೋಧಕ ನೌಕೆಯು ಮಂಗಳ ಗ್ರಹದ ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಆದರೆ, ಅದು ಕೆಂಪು ಗ್ರಹ (ಮಂಗಳ)ದ ಮೇಲೆ ಇಳಿಯುವುದಿಲ್ಲ. ಬದಲಿಗೆ, ಅದು ಒಂದು ಇಡೀ ಮಂಗಳ ವರ್ಷ (687 ದಿನಗಳು) ಆ ಗ್ರಹದ ಸುತ್ತ ತಿರುಗುತ್ತದೆ.

► ಭೂಮಿಯ ಅತಿ ಸನಿಹಕ್ಕೆ ಬಂದಿರುವ ಮಂಗಳ

ಭೂಮಿ ಮತ್ತು ಮಂಗಳ ಗ್ರಹಗಳು ಅತ್ಯಂತ ಸಮೀಪದಿಂದ ಹಾದು ಹೋಗುವ ಅವಕಾಶವನ್ನು ಬಳಸಿಕೊಳ್ಳುವ ಮೂರು ಮಂಗಳ ಗ್ರಹ ಯೋಜನೆಗಳ ಪೈಕಿ ಯುಎಇಯ ‘ಹೋಪ್’ ಒಂದಾಗಿದೆ. ಚೀನಾದ ‘ತಿಯಾನ್ವೆನ್-1’ ಮತ್ತು ಅಮೆರಿಕದ ‘ಮಾರ್ಸ್2020’ ಉಳಿದ ಎರಡು ಮಂಗಳ ಯೋಜನೆಗಳು. ‘ತಿಯಾನ್ವೆನ್-1’ ಜುಲೈ 23ರಂದು ಉಡಾವಣೆಗೊಳ್ಳಲು ನಿಗದಿಯಾದರೆ, ‘ಮಾರ್ಸ್2020’ ಜುಲೈ 30ರಂದು ಹಾರಾಟಕ್ಕೆ ಸಿದ್ಧವಾಗಿದೆ.

ಅಕ್ಟೋಬರ್‌ನಲ್ಲಿ ಮಂಗಳ ಮತ್ತು ಭೂಮಿಗಳು ಪರಸ್ಪರ ಅತ್ಯಂತ ಸಮೀಪಕ್ಕೆ ಬರಲಿದ್ದು, ಅವುಗಳ ನಡುವಿನ ದೂರವು ಸುಮಾರು 6.20 ಕೋಟಿ ಕಿಲೋಮೀಟರ್ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ. ಅವುಗಳ ನಡುವಿನ ಗರಿಷ್ಠ ದೂರವು 40 ಕೋಟಿ ಕಿ.ಮೀ. ಆಗಿರುತ್ತದೆ.

► 100 ವರ್ಷಗಳಲ್ಲಿ ಕೆಂಪು ಗ್ರಹದಲ್ಲಿ ಮಾನವ ವಸಾಹತಿಗೆ ಅಡಿಪಾಯ

ಮಂಗಳ ಗ್ರಹದ ಹವಾಮಾನ ವ್ಯವಸ್ಥೆ ಬಗ್ಗೆ ಸಮಗ್ರ ಚಿತ್ರಣವನ್ನು ಪಡೆಯುವುದು ಯುಎಇಯ ಮಂಗಳ ಗ್ರಹ ಶೋಧಕ ನೌಕೆಯ ಉದ್ದೇಶವಾಗಿದೆ.

ಆದರೆ, ಈ ಯೋಜನೆಯು ಮುಂದಿನ ಬೃಹತ್ ಯೋಜನೆಯೊಂದರ ಅಡಿಪಾಯವೂ ಆಗಿದೆ. ಮುಂದಿನ 100 ವರ್ಷಗಳಲ್ಲಿ ಮಂಗಳ ಗ್ರಹದಲ್ಲಿ ಸಂಭಾವ್ಯ ಮಾನವ ವಸಾಹತೊಂದನ್ನು ಸ್ಥಾಪಿಸುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ. ಅದಕ್ಕಾಗಿ ಪೂರ್ವ ಸಿದ್ಧತೆ ಮಾಡುವ ಗುರಿಯನ್ನೂ ಈ ಯೋಜನೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News