ಉಡುಪಿ: ಕೋವಿಡ್-19 ನಿಯಂತ್ರಣಕ್ಕೆ ಔಷಧ ನಿಯಂತ್ರಣ ಇಲಾಖೆ ಕಠಿಣ ಕ್ರಮ
ಉಡುಪಿ, ಜು.20: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡದಂತೆ ನಿಯಂತ್ರಿಸುವಲ್ಲಿ ಜಿಲ್ಲೆಯ ಔಷಧ ನಿಯಂತ್ರಣ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದೆ. ಇಲಾಖೆ ಆರಂಭದಿಂದಲೇ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಸೋಂಕು ಪೀಡಿತರ ತ್ವರಿತ ಪತ್ತೆ ಹಾಗೂ ಚಿಕಿತ್ಸೆಗೆ ತುರ್ತು ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿದೆ.
ಸಾಮಾನ್ಯವಾಗಿ ಕೋವಿಡ್-19 ಸೋಂಕು, ಜ್ವರ ಶೀತ ಕೆಮ್ಮು ಲಕ್ಷಣಗಳಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕರಾವಳಿಯ ಜಿಲ್ಲೆಗಳಲ್ಲಿ ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ಅಧಿಕ ಸಂಖ್ಯೆಯಲ್ಲಿ ಕಂಡುಬರುವ ನೆಗಡಿ, ಶೀತ, ಕೆಮ್ಮು, ಜ್ವರದ ಲಕ್ಷಣಗಳಿರುವ ವ್ಯಕ್ತಿಗಳು ಮೆಡಿಕಲ್ ಶಾಪ್‌ಗಳಲ್ಲಿ ಔಷಧ, ಮಾತ್ರೆಗಳನ್ನು ಪಡೆದು, ಅದನ್ನೇ ಹೆಚ್ಚಾಗಿ ಸೇವಿಸುತ್ತಾರೆ. ಒಂದೆರಡು ದಿನದಲ್ಲಿ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮಾತ್ರ ವೈದ್ಯರ ಬಳಿ ತೆರಳುತ್ತಾರೆ. ಆದರೆ ಇದೀಗ ಕೋವಿಡ್-19ರ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ಹೊಂದಿದೆ. ಇದರಿಂದ ಕೋವಿಡ್-19ತಪಾಸಣೆ ತಪ್ಪಿ ಹೋಗಿ ಸೋಂಕು ಅಧಿಕ ಪ್ರಮಾಣದಲ್ಲಿ, ವ್ಯಾಪಕ ಮಟ್ಟದಲ್ಲಿ ಹರಡುವ ಸಾಧ್ಯತೆ ಇರುತ್ತದೆ.
ಇದನ್ನು ತಪ್ಪಿಸಲು ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ಯಾವುದೇ ಮೆಡಿಕಲ್ ಶಾಪ್‌ಗಳಲ್ಲಿ, ನೆಗಡಿ, ಶೀತ, ಕೆಮ್ಮು, ಜ್ವರಕ್ಕೆ ಯಾವುದೇ ಔಷಧಿ, ಮಾತ್ರೆ, ಸಿರಪ್‌ಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಿದೆ.ಜಿಲ್ಲೆಯಲ್ಲಿ ಒಟ್ಟು 385 ಮೆಡಿಕಲ್ ಶಾಪ್‌ಗಳಿದ್ದು, ಎಲ್ಲಾ ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಅನುಮತಿ ಚೀಟಿ ಇಲ್ಲದೇ ಜ್ವರ ಕೆಮ್ಮು ಶೀತ ರೋಗಿಗಳಿಗೆ ಔಷಧ ವಿತರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವೈದ್ಯರ ಅನುಮತಿ ಮೇರೆಗೆ ಔಷಧ ನೀಡಿದಲ್ಲಿ ಅಂತಹ ವ್ಯಕ್ತಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸುವಂತೆ ಸೂಚಿಸಿದ್ದು, ಇದಕ್ಕಾಗಿ ಫಾರ್ಮಾ ರಿಫೋರ್ಟಿಂಗ್ ಬ್ಯಾಕ್‌ಅಪ್ ಎಂಬ ಸಾಫ್ಟ್‌ವೇರ್ ತಯಾರಿಸಿ, ಇದರಲ್ಲಿ ಜ್ವರ ಶೀತ ಕೆಮ್ಮು ರೋಗಗಳಿಗೆ ಔಷಧ ಪಡೆದ ವ್ಯಕ್ತಿಯ ಎಲ್ಲಾ ವಿವರಗಳನ್ನು ಕೂಡಲೇ ದಾಖಲಿಸಲಾಗುತ್ತಿದೆ.
ಹೀಗೆ ಪಡೆದ ಜ್ವರ ಶೀತ ಕೆಮ್ಮು ರೋಗಗಳಿಗೆ ಔಷಧ ಪಡೆದ ವ್ಯಕ್ತಿಯ ವಿವರಗಳನ್ನು ಮೆಡಿಕಲ್ ಶಾಪ್‌ಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡುತ್ತವೆ. ಈ ವ್ಯಕ್ತಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆತನ ಆರೋಗ್ಯ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಪಡೆದು, ಅಗತ್ಯ ಬಿದ್ದಲ್ಲಿ ಆತನ ಪರೀಕ್ಷೆ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಐಎಲ್‌ಐ(ಶೀತಜ್ವರ) ಮತ್ತು ಸಾರಿ (ಉಸಿರಾಟತೊಂದರೆ)ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ.
ಉಡುಪಿ ಜಿಲ್ಲೆಯ ಮೆಡಿಕಲ್ ಶಾಪ್‌ಗಳು ಪ್ರತಿದಿನ ತಾವು ಜ್ವರ ಕೆಮ್ಮು ಶೀತ ರೋಗಿಗಳಿಗೆ ಔಷಧ ನೀಡಿದ ವಿವರಗಳನ್ನು ಸಾಪ್ಟ್‌ವೇರ್‌ನಲ್ಲಿ ದಾಖಲಿಸುತ್ತಿದ್ದು, ಪ್ರತಿದಿನ ಶೇ.95 ವರದಿಯಾಗುತ್ತಿದೆ. ಜಿಲ್ಲೆಯ ಎಲ್ಲಾ ಮೆಡಿಕಲ್ ಶಾಪ್‌ಗಳು ಈ ವರದಿಯನ್ನು ಇಲಾಖೆಗೆ ನೀಡುತ್ತಿದ್ದು, ಜಿಲ್ಲೆಯ ಔಷಧ ಮಾರಾಟಗಾರರ ಸಂಘದಿಂದ ಸಹ ಉತ್ತಮ ಸಹಕಾರ ದೊರೆಯುತ್ತಿದೆ ಎನ್ನುತ್ತಾರೆ ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿ ನಾಗರಾಜ್.
ಪ್ರಾರಂಭದ ಕೆಲ ದಿನ ತಾಂತ್ರಿಕ ಸಮಸ್ಯೆಗಳಿಂದ ಸಾಫ್ಟ್‌ವೇರ್‌ನಲ್ಲಿ ತೊಂದರೆಗಳುಂಟಾದರೂ, ಸತತ ಪ್ರಯತ್ನದ ಬಳಿಕ ಅದೀಗ ಬಗೆಹರಿದಿದೆ. ಹಾಗೂ ಇದರ ಬಳಕೆಯೂ ಅತ್ಯಂತ ಸುಲಭವಾಗಿದೆ. ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಎಸ್ಪಿ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ ಇು ಸಾಧ್ಯವಾಗಿದೆ ಎಂದರು ನಾಗರಾಜ್.
ಜಿಲ್ಲೆಯ ಎಲ್ಲಾ ಮೆಡಿಕಲ್ ಶಾಪ್‌ಗಳು ಅತ್ಯಂತ ಕಟ್ಟುನಿಟ್ಟಾಗಿ ನಿಯಮ ಗಳನ್ನು ಪಾಲಿಸುತ್ತಿದ್ದು, ವೈದ್ಯರ ಸಲಹಾ ಚೀಟಿಯಿಲ್ಲದೇ ಜ್ವರ ಶೀತ ಕೆಮ್ಮ ರೋಗಕ್ಕೆ ಔಷಧಗಳನ್ನು ನೀಡುತ್ತಿಲ್ಲ. ಜಿಲ್ಲೆಯ ಕೆಲ ಹಿರಿಯ ಅಧಿಕಾರಿಗಳು ಸೇರಿದಂತೆ ಸಮಸ್ಯೆಗೆ ಒಳಗಾದ ಜನರು ತಮಗೆ ಕರೆ ಮಾಡುತ್ತಾರೆ. ಅದರೆ ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಮಾಡಿದ ನಿಯಮ ಗಳಿಗೆ ಇಲಾಖೆ ಬದ್ದವಾಗಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು, ರೋಗ ಲಕ್ಷಣಗಳಿದ್ದಲ್ಲಿ ತಮ್ಮ ಸಮೀಪದಲ್ಲಿರುವ ಫೀವರ್ ಕ್ಲಿನಿಕ್‌ಗಳಲ್ಲಿ ಪರೀಕ್ಷಿಸಿಕೊಂಡು, ಸೋಂಕು ಹರಡದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿ ನಾಗರಾಜ್ ಹೇಳುತ್ತಾರೆ.