ಅಯೋಧ್ಯೆ ರಾಮಮಂದಿರ ಭೂಗರ್ಭಕ್ಕೆ ಉಡುಪಿಯ ಮಣ್ಣು

Update: 2020-07-20 16:12 GMT

ಉಡುಪಿ, ಜು.20: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮ ಮಂದಿರದ ತಳಭಾಗಕ್ಕೆ ದೇಶದ ನೂರಾರು ನದಿಗಳು, ಅನೇಕ ಪುಣ್ಯ ಕ್ಷೇತ್ರಗಳ ಪವಿತ್ರ ಮಣ್ಣು ಸೇರಿಸಲು ವಿಶ್ವ ಹಿಂದು ಪರಿಷತ್ ನಿರ್ಧರಿಸಿದ್ದು, ಅದರಂತೆ ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣನ ಗಂಧ ಪ್ರಸಾದ, ನಿರ್ಮಾಲ್ಯವಿಟ್ಟು ಮಂಗಳಾರತಿ ಬೆಳಗಿ ಶುಭ ಹಾರೈಸಿ ಮೃತ್ತಿಕೆ (ಮಣ್ಣು) ತುಂಬಿದ್ದ ಹಿತ್ತಾಳೆಯ ಕರಂಡಕವನ್ನು ವಿಹಿಂಪ ಉಡುಪಿಯ ಪ್ರಮುಖರಿಗೆ ಸೋಮವಾರ ಹಸ್ತಾಂತರಿಸಿದರು.

ಸ್ವಾಮೀಜಿಯವರಿಂದ ಮೃತ್ತಿಕೆಯನ್ನು ಸ್ವೀಕರಿಸಿದ ಕಾರ್ಯಕರ್ತರು ರಥಬೀದಿಯಲ್ಲಿ ರಾಮಸ್ಮರಣೆಯೊಂದಿಗೆ ಮೆರವಣಿಗೆ ಬಂದು ಶ್ರೀಅನಂತೇಶ್ವರ ದೇವಳಕ್ಕೆ ತೆರಳಿ ಅಲ್ಲಿ ಅರ್ಚಕರ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅದನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಯಿತು.

ವಿಹಿಂಪ ಜಿಲ್ಲಾಧ್ಯಕ್ಷ ಪಿ.ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ್ ಮೆಂಡನ್, ಬಜರಂಗದಳ ಪ್ರಾಂತ ಸಹಸಂಚಾಲಕ ಸುನಿಲ್ ಕೆ.ಆರ್., ಮಠದ ವ್ಯವಸ್ಥಾಪಕ ಗೋವಿಂದರಾಜ್, ವಿದ್ವಾನ್ ರಾಮನಾಥ ಆಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಆ.5ರಂದು ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಮಂದಿರದ ಜಾಗದಲ್ಲಿ ಉಡುಪಿಯ ಮಣ್ಣನ್ನು ಸಹ ಭೂಮಿಗೆ ಅರ್ಪಿಸಲಿದ್ದಾರೆ. ಚಾತುರ್ಮಾಸ್ಯ ವ್ರತದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಆ.5 ರಂದು ನಡೆಯಲಿರುವ ಶಿಲಾನ್ಯಾಸ ಸಮಾರಂಭದಲ್ಲಿ ಪೇಜಾವರ ಸ್ವಾಮೀಜಿ ಭಾಗವಹಿಸುತ್ತಿಲ್ಲ ಎಂದು ಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News