ಉಡುಪಿಯಲ್ಲಿ ಕೇರಳದ ಕೊರೋನ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ
ಉಡುಪಿ, ಜು.21: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟ ಕೊರೋನ ಸೋಂಕಿತ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ 35ರ ಹರೆಯದ ಯುವಕನ ಅಂತ್ಯಕ್ರಿಯೆಯನ್ನು ಜು.21ರಂದು ಉಡುಪಿಯ ಖಬರಸ್ತಾನದಲ್ಲಿ ನೆರವೇರಿಸಲಾಯಿತು.
ಮಣಿಪಾಲದ ಕೆಎಂಸಿಯಲ್ಲಿ ನಿನ್ನೆ ರಾತ್ರಿ ಮೃತಪಟ್ಟ ಕೇರಳದ ಯುವಕ ಕಿಡ್ನಿ ಸಮಸ್ಯೆಗಾಗಿ ಕಳೆದ 15ದಿನಗಳಿಂದ ಚಿಕಿತ್ಸೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಆ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಆತ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದಾನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಲಾಕ್‌ಡೌನ್ ಹಾಗೂ ಉಡುಪಿಯಲ್ಲಿ ಗಡಿ ಸೀಲ್‌ಡೌನ್ ಇರುವುದರಿಂದ ಆತನ ಅಂತ್ಯಸಂಸ್ಕಾರವನ್ನು ಉಡುಪಿಯ ದಫನ ಭೂಮಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್-19 ಮಾರ್ಗಸೂಚಿಯಂತೆ ದ.ಕ. ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ತಂಡ ಹಾಗೂ ದ.ಕ.ಜಿಲ್ಲಾ ಎಐಕೆಎಂಸಿಸಿ ತಂಡ ಹಾಗೂ ಉಡುಪಿ ಯ ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮ್ಮದ್, ಅಪತ್ಬಾಂಧವ ಅಸೀಫ್, ನಾಸಿರ್ ಯಾಕೂಬ್ ಅಂತ್ಯಕ್ರಿಯೆಯನ್ನು ನೆವೇರಿಸಿದರು.
ದ.ಕ.ಜಿಲ್ಲಾ ವಿಖಾಯ ತಂಡದ ಚೇಯರ್‌ಮೆನ್ ಸೈಯ್ಯದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಎಸ್‌ಕೆಎಸ್‌ಎಸ್‌ಎಫ್ ದ.ಕ. ಜಿಲ್ಲಾ ಸಂಚಾಲಕ ಆಸೀಫ್ ಕಬಕ, ಸಿದ್ದೀಕ್ ನಿರಾಜೆ, ಶಮೀರ್, ದ.ಕ.ಜಿಲ್ಲಾ ಎಐಕೆಎಂಸಿಸಿ ತಂಡದ ಸ್ಯಯ್ಯದ್ ಅಫ್ವಾಮ್ ಅಲಿ ತಂಙಳ್, ಅಶ್ರಫ್ ತಂಙಳ್ ಮಣಿಪಾಲ, ಹನೀಫ್ ಹಾಜಿ, ಉದಯ ಪುತ್ತೂರು, ಮೃತರ ಕುಟುಂಬಿಕರಾದ ಜಾಫರ್ ಮತ್ತು ಅಸ್ಲಾಂ ಕಣ್ಣೂರು ಸಹಕರಿಸಿದರು.