ಹಾವಂಜೆಯ 3 ಮನೆಗಳ 13 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಜು.21: ನಾಲ್ಕು ದಿನಗಳ ಹಿಂದೆ ಹಾವಂಜೆಯಲ್ಲಿ ಪಾಸಿಟಿವ್ ಬಂದ 37 ವರ್ಷ ಪ್ರಾಯದ ಮಹಿಳೆಯೊಬ್ಬರ ಪ್ರಾಥಮಿಕ ಸಂಪರ್ಕಿತ ಮೂರು ಮನೆಗಳ 18 ಜನರ ಪೈಕಿ 13 ಮಂದಿಗೆ ಇಂದು ಕೊರೋನ ಸೊಂಕು ದೃಢಪಟ್ಟಿದೆ ಎಂದು ಬಂದಿದೆ. ಇವರೆಲ್ಲರನ್ನೂ ಈಗ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬ್ರಹ್ಮಾವರದ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.
ಈ ಮೂರು ಮನೆಗಳನ್ನು ಜು.16ರಂದೇ ಸೀಲ್‌ಡೌನ್ ಮಾಡಲಾಗಿದ್ದು, ಅದರಲ್ಲಿ ಎಲ್ಲಾ 18 ಮಂದಿಯ ಗಂಟಲುದ್ರವ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅವುಗಳಲ್ಲಿ 13 ಸ್ಯಾಂಪಲ್‌ಗಳು ಇಂದು ಪಾಸಿಟಿವ್ ಆಗಿ ಬಂದಿವೆ ಎಂದು ಅವರು ತಿಳಿಸಿದರು.
ಉಳಿದಂತೆ ಬ್ರಹ್ಮಾವರ ಹೋಬಳಿಯಲ್ಲಿ ಇಂದು ಹೇರೂರು, ಹಾರಾಡಿ, ಬೈಕಾಡಿ ಹಾಗೂ ವಾರಂಬಳ್ಳಿ ಬಿರ್ತಿಯಲ್ಲಿ ತಲ್ಲಾ ಒಬ್ಬರಲ್ಲಿ ಪಾಸಿಟಿವ್ ಕಂಡು ಬಂದಿದೆ. ಇದರಿಂದ ಹೇರೂರಿನಲ್ಲಿ 3, ವಾರಂಬಳ್ಳಿಯಲ್ಲಿ ಎರಡು, ಬೈಕಾಡಿ ಹಾಗೂ ಹಾರಾಡಿಯಲ್ಲಿ ತಲಾ ಎರಡು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಕಿರಣ್ ಗೋರಯ್ಯ ತಿಳಿಸಿದರು.
ಕೋವಿಡ್ ವೈದ್ಯರಿಗೆ ಪಾಸಿಟಿವ್: ಬ್ರಹ್ಮಾವರ ತಾಲೂಕು ಕೋಟ ಹೋಬಳಿಯಲ್ಲಿ ಇಂದು ಒಟ್ಟು ಐವರಲ್ಲಿ ಪಾಸಿಟಿವ್ ಕಂಡುಬಂದಿದೆ. ಇವುಗಳಲ್ಲಿ ಐರೋಡಿಯ ಕೋವಿಡ್ ಕರ್ತವ್ಯದಲ್ಲಿರುವ ಸರಕಾರಿ ವೈದ್ಯರೂ ಸೇರಿದ್ದಾರೆ. ಇಲ್ಲಿನ ಮತ್ತೊಬ್ಬ ವ್ಯಕ್ತಿಯಲ್ಲೂ ಪಾಸಿಟಿವ್ ಕಂಡುಬಂದಿದೆ ಎಂದೂ ಕೋಟದ ಆರ್‌ಐ ರಾಜು ತಿಳಿಸಿದ್ದಾರೆ.
ಗೇರುಬೀಜ ಕಾರ್ಖಾನೆ ಸೀಲ್‌ಡೌನ್: ಹೆಗ್ಗುಂಜೆಯ ಗೇರುಬೀಜ ಕಾರ್ಖಾನೆಯ 30 ಮತ್ತು 35 ವರ್ಷ ಪ್ರಾಯದ ಇಬ್ಬರು ನೌಕರರಲ್ಲಿ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಈ ಕಾರ್ಖಾನೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಇನ್ನೂ 15 ಮಂದಿ ನೌಕರರ ಗಂಟಲುದ್ರವದ ಮಾದರಿ ಪಡೆದು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇನ್ನುಳಿದಂತೆ ಹಿಲಿಯಾಣದಲ್ಲಿ ಒಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.
ಬೈಂದೂರು-7: ಬೈಂದೂರು ತಾಲೂಕಿನಲ್ಲಿ ಇಂದು ಒಟ್ಟು ಏಳು ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿ ಹಲವು ಮನೆ ಹಾಗೂ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಯಡ್ತರೆ, ಮಧೂರು, ನಾಡಾ, ಕಿರಿಮಂಜೇಶ್ವರ, ಮರವಂತೆ, ಪಡುವರಿಗಳಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ ಎಂದು ತಹಶೀಲ್ದಾರ್ ಬಸಪ್ಪ ತಿಳಿಸಿದ್ದಾರೆ.
ಉಡುಪಿ-11: ಉಡುಪಿ ತಾಲೂಕಿನಲ್ಲೂ ಇಂದು 11 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ತೆಂಕನಿಡಿಯೂರು 1, ಕಿದಿಯೂರು 1, ಶಿವಳ್ಳಿ 3, ಕಡೆಕಾರು 3, 80 ಬಡಗುಬೆಟ್ಟು 2, ಕೊರಂಗ್ರಪಾಡಿಯಲ್ಲಿ ಒಂದು ಪ್ರಕರಣಗಳಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.