ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಐವರು ಬಲಿ: 149 ಹೊಸ ಸೋಂಕಿತರು ಪತ್ತೆ
ಮಂಗಳೂರು, ಜು.21: ದ.ಕ. ಜಿಲ್ಲೆಯಲ್ಲಿ ಕೋವಿಡ್‌ಗೆ ಮತ್ತೆ ಐವರು ಬಲಿಯಾಗಿದ್ದಾರೆ. ಈ ನಡುವೆ ಕಳೆದ ಎರಡು ಮೂರು ದಿನಗಳಿಂದ ಇಳಿಕೆಯ ಹಂತದಲ್ಲಿದ್ದ ಕೊರೋನ ಸೋಂಕು ಪ್ರಕರಣದಲ್ಲಿ ಪುನಃ ಏರಿಕೆಯಾಗಿದ್ದು, ಹೊಸದಾಗಿ ಮಂಗಳವಾರ ಮತ್ತೆ 149 ಸೋಂಕಿತರು ಪತ್ತೆಯಾಗಿದ್ದಾರೆ.
ಕೋವಿಡ್‌ನಿಂದಾಗಿ ಐವರು ಮೃತಪಟ್ಟಿದ್ದು, ಇಲ್ಲಿಯವರೆಗೆ ಈ ಮಹಾಮಾರಿಗೆ 87 ಮಂದಿ ಬಲಿಯಾಗಿದ್ದಾರೆ. ಇದರಲ್ಲಿ 15 ಮಂದಿ ಹೊರಜಿಲ್ಲೆಯವರು.
ಮಂಗಳೂರಿನ ನಿವಾಸಿ 81ವರ್ಷದ ವೃದ್ಧ ತೀವ್ರ ಉಸಿರಾಟ ತೊಂದರೆ, ಬೆಳ್ತಂಗಡಿಯ 51 ವರ್ಷದ ಪುರುಷ ಶ್ವಾಸಕೋಶ ತೊಂದರೆ, ತೀವ್ರ ರಕ್ತದೊತ್ತಡ, ಡಯಾಬಿಟಿಸ್, ತೀವ್ರ ಉಸಿರಾಟ ತೊಂದರೆ, ಭಟ್ಕಳದ 65 ವರ್ಷದ ವೃದ್ಧ ‘ಸೆಪ್ಸಿಸ್ ವಿತ್ ಸೆಪ್ಟಿಕ್ ಶಾಕ್’ ಕಾಯಿಲೆ, ಹಾವೇರಿಯ ಬ್ಯಾಡಗಿ 63 ವರ್ಷದ ವೃದ್ಧನು ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್, ಮಂಗಳೂರಿನ 52 ವರ್ಷದ ಮಹಿಳೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಮೃತರೆಲ್ಲ ಕೋವಿಡ್ ಸೋಂಕು ತಗುಲಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
149 ಹೊಸ ಸೋಂಕಿತರು: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 149 ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,834ಕ್ಕೆ ಏರಿಕೆಯಾಗಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 23, ಶೀತ-67, ತೀವ್ರ ಉಸಿರಾಟ ತೊಂದರೆ-22, ಕಾಂಟ್ಯಾಕ್ಟ್ ಟ್ರೇಸಿಂಗ್‌ನ 15 ಹಾಗೂ ವಿದೇಶದಿಂದ ಬಂದಿದ್ದ ಓರ್ವನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 127 ಮಂದಿ ಗುಣಮುಖರಾಗಿದ್ದು, ಮನೆಗೆ ತೆರಳಿದ್ದಾರೆ. ಇಲ್ಲಿಯವರೆಗೆ 1,675 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ 2,070 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.