ಅಫ್ಘಾನಿಸ್ತಾನ: ಹೆತ್ತವರನ್ನು ಕೊಂದ ತಾಲಿಬಾನಿಗಳನ್ನು ಹತ್ಯೆಗೈದ ಬಾಲಕಿ

Update: 2020-07-21 18:15 GMT

ಘಝನಿ (ಅಫ್ಘಾನಿಸ್ತಾನ), ಜು. 21: ಕಳೆದ ವಾರ ತಾಲಿಬಾನ್ ಭಯೋತ್ಪಾದಕರು ತನ್ನ ಕಣ್ಣೆದುರೇ ತಂದೆ-ತಾಯಿಯರನ್ನು ಹತ್ಯೆಗೈದಾಗ ಆಕ್ರೋಶಗೊಂಡ ಓರ್ವ ಬಾಲಕಿಯು ಇಬ್ಬರು ಭಯೋತ್ಪಾದಕರನ್ನು ಗುಂಡಿಟ್ಟು ಕೊಂದಿದ್ದು, ಹಾಗೂ ಹಲವರನ್ನು ಗಾಯಗೊಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ಸರಕಾರವನ್ನು ಬೆಂಬಲಿಸುತ್ತಿದ್ದ ಘೋರ್ ಪ್ರಾಂತದ ಗ್ರಾಮವೊಂದರ ಮುಖ್ಯಸ್ಥನನ್ನು ಹುಡುಕುತ್ತಾ ತಾಲಿಬಾನ್ ಭಯೋತ್ಪಾದಕರು ಬಾಲಕಿ ಕಮರ್ ಗುಲ್‌ರ ಮನೆಯನ್ನು ಹೊಕ್ಕರು. ಭಯೋತ್ಪಾದಕರು ಬಾಲಕಿಯ ತಂದೆಯನ್ನು ಹೊರಗೆ ಎಳೆದುಕೊಂಡು ಹೋದಾಗ ಅವರ ಪತ್ನಿ ತಡೆದರು. ಆಗ ಇಬ್ಬರನ್ನೂ ಹೊರಗೆ ಎಳೆದುಕೊಂಡು ಹೋದ ಭಯೋತ್ಪಾದಕರು ಮನೆಯ ಹೊರಗೆ ಇಬ್ಬರನ್ನೂ ಗುಂಡಿಟ್ಟು ಕೊಂದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘‘ಆಗ ಮನೆಯೊಳಗೆ ಇದ್ದ ಕಮರ್ ಗುಲ್ ಆಕ್ರೋಶಗೊಂಡು ಮನೆಯಲ್ಲೇ ಇದ್ದ ಕುಟುಂಬಕ್ಕೆ ಸೇರಿದ ಎಕೆ-47 ರೈಫಲನ್ನು ಹಿಡಿದುಕೊಂಡು ತನ್ನ ಹೆತ್ತವರನ್ನು ಕೊಂದ ಇಬ್ಬರು ಭಯೋತ್ಪಾದಕರನ್ನು ಕೊಂದರು ಹಾಗೂ ಇತರ ಹಲವಾರು ಭಯೋತ್ಪಾದಕರನ್ನು ಗಾಯಗೊಳಿಸಿದರು’’ ಎಂದು ಅವರು ನುಡಿದರು.

ಬಾಲಕಿಗೆ 14ರಿಂದ 16 ವರ್ಷ ವಯಸ್ಸಾಗಿರಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಬಳಿಕ ಬಾಲಕಿಯ ಮನೆಯ ಮೇಲೆ ದಾಳಿ ನಡೆಸಲು ಇತರ ಹಲವಾರು ತಾಲಿಬಾನ್ ಭಯೋತ್ಪಾದಕರು ಧಾವಿಸಿದರು. ಆದರೆ, ಕೆಲವು ಗ್ರಾಮಸ್ಥರು ಮತ್ತು ಸರಕಾರಿ ಪರ ಬಾಡಿಗೆ ಹೋರಾಟಗಾರರು ಗುಂಡಿನ ಕಾಳಗದಲ್ಲಿ ಅವರನ್ನು ಹಿಮ್ಮೆಟ್ಟಿಸಿದರು. ಬಳಿಕ, ಗುಲ್ ಮತ್ತು ಆಕೆಯ ತಮ್ಮನನ್ನು ಅಫ್ಘಾನ್ ಸೈನಿಕರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಶೌರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News