ಆಸ್ಟ್ರೇಲಿಯ ಪ್ರವಾಸಕ್ಕೆ ಮೊಟೆರಾದಲ್ಲಿ ತಯಾರಿ ನಡೆಸಲಿರುವ ಟೀಮ್ ಇಂಡಿಯಾ

Update: 2020-07-22 04:52 GMT

ಅಹಮದಾಬಾದ್, ಜು.21: ಕೋವಿಡ್-19 ಲಾಕ್‌ಡೌನ್ ಬಳಿಕ ಟೀಮ್ ಇಂಡಿಯಾ ಮೊದಲ ಅಂತರ್‌ರಾಷ್ಟ್ರೀಯ ಪ್ರವಾಸ ಸರಣಿಯನ್ನು ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯದಲ್ಲಿ ಆಡಲು ತೆರಳಲಿದ್ದು, ಈ ಉದ್ದೇಶಕ್ಕಾಗಿ ಮೊಟೆರಾದಲ್ಲಿ ತಯಾರಿ ಆರಂಭಿಸಲಿದೆ.

ಅಹಮದಾಬಾದ್‌ನ ನವೀಕರಣಗೊಂಡಿರುವ ಮೊಟೆರಾದ ಅತ್ಯಾಧುನಿಕ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ತರಬೇತಿ ನೀಡಲು ಬಿಸಿಸಿಐ ಯೋಜಿಸುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಮೊಟೆರಾದಲ್ಲಿರುವ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಆ ಕ್ರೀಡಾಂಗಣವನ್ನು ಅಭ್ಯಾಸಕ್ಕೆ ಆಯ್ಕೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶುಕ್ರವಾರ ನಡೆದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತರಬೇತಿ ಶಿಬಿರವನ್ನು ನಡೆಸಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಸೇರಿದಂತೆ ಹಲವಾರು ಕ್ರೀಡಾಂಗಣಗಳ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಮೊಟೆರಾ ಕ್ರೀಡಾಂಗಣದಲ್ಲಿ ಅಭ್ಯಾಸ ಶಿಬಿರವನ್ನು ಏರ್ಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ.

ಮೊಟೆರಾ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ತರಬೇತಿ ಸೌಲಭ್ಯಗಳ ಜೊತೆಗೆ ಅತ್ಯುತ್ತಮ ವಸತಿ ಸೌಕರ್ಯಗಳು ಇವೆ. ‘‘ಕೋವಿಡ್-19 ಪ್ರಕರಣಗಳು ಬೆಂಗಳೂರು ನಗರದಲ್ಲಿ ಉಲ್ಬಣಗೊಳ್ಳುತ್ತಿರುವುದರಿಂದ ನಾವು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ಅಹಮದಾಬಾದ್‌ನ ಮೊಟೆರಾದಲ್ಲಿ ಸೌಲಭ್ಯಗಳೊಂದಿಗೆ, ಜೈವಿಕ ಸುರಕ್ಷಿತ ವಾತಾವರಣದಲ್ಲಿ ತರಬೇತಿ ಶಿಬಿರವನ್ನು ನಡೆಸುವ ಸ್ಥಳವಾಗಿದೆ, ’’ಎಂದು ಅಪೆಕ್ಸ್ ಕೌನ್ಸಿಲ್ ಸದಸ್ಯರೊಬ್ಬರು ತಿಳಿಸಿದ್ದಾರೆ.

800 ಕೋಟಿ ರೂ.ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ನವೀಕರಿಸಲಾಗಿತ್ತು. ಈ ಕ್ರೀಡಾಂಗಣದಲ್ಲಿ ಈ ಹಿಂದೆ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಂಗಣದಲ್ಲಿ 1,10,000 ಪ್ರೇಕ್ಷಕರಿಗೆ ಆಸನದ ವ್ಯವಸ್ಥೆ ಇದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ತೀವ್ರವಾಗಿ ಹಾನಿಗೊಳಗಾದ ಕ್ರಿಕೆಟ್ ಆಸ್ಟ್ರೇಲಿಯವು ಭಾರತದ ಪ್ರವಾಸವನ್ನು ಪುನಶ್ಚೇತನದ ಸರಣಿಯನ್ನಾಗಿ ನೋಡುತ್ತಿದೆ.

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಿಗದಿಯಾಗಿದ್ದ ಟ್ವೆಂಟಿ-20 ವಿಶ್ವಕಪ್‌ನ್ನು ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಐಸಿಸಿ ಮುಂದೂಡಿದೆ.

‘‘ಕ್ವಾರೆಂಟೈನ್ ದಿನಗಳ ಸಂಖ್ಯೆ ಸ್ವಲ್ಪ ಕಡಿಮೆಯಾದರೆ ಉತ್ತಮ. ನಮ್ಮ ಆಟಗಾರರು ಅಷ್ಟು ದೂರ ಹೋಗಿ ಹೊಟೇಲ್ ಕೋಣೆಗಳಲ್ಲಿ ಎರಡು ವಾರಗಳ ಕಾಲ ಕುಳಿತುಕೊಳ್ಳುವುದು ನಮಗೆ ಇಷ್ಟವಿಲ್ಲ. ಇದರಿಂದ ಆಟಗಾರರು ತುಂಬಾ ಖಿನ್ನತೆಗೊಳಗಾಗುವ ಸಾಧ್ಯತೆ ಇದೆ’’ಎಂದು ಗಂಗುಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News