ಸರಕಾರದ ಆದೇಶ ಕಡೆಗಣಿಸಿ ಭೋದನಾ ಶುಲ್ಕ ಹೆಚ್ಚಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳು: ಡಿವೈಎಫ್ಐ ಅರೋಪ

Update: 2020-07-23 07:17 GMT

ಮಂಗಳೂರು, ಜು.23: ಕೋವಿಡ್19 ಲಾಕ್ ಡೌನ್ ಹಿನ್ನಲೆಯಲ್ಲಿ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಯಾವುದೇ ಬೋಧನಾ ಶುಲ್ಕ ಹೆಚ್ಚಿಸಬಾರದು ಮತ್ತು ಇದನ್ನು ಉಲ್ಲಂಘಿಸುವ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಾಗುವುದೆಂದು ಸೂಚಿಸಿದ್ದರೂ ಅದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮದ ವಿರುದ್ಧವಾಗಿ ಭೋದನಾ ಶುಲ್ಕವನ್ನು ಹೆಚ್ಚಿಸಿದೆ ಎಂದು ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.

ಮಂಗಳೂರಿನ ಜಪ್ಪಿನಮೊಗರಿನಲ್ಲಿರುವ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಈ ಶೈಕ್ಷಣಿಕ ವರುಷದ ಭೋದನಾ ಶುಲ್ಕದಲ್ಲಿ ಸುಮಾರು 25,000/- ದಷ್ಟು ಹೆಚ್ಚಿಸಿದೆ ಮಾತ್ರವಲ್ಲ ಕೂಡಲೇ ಸಂದಾಯ ಮಾಡಬೇಕೆಂದು ಪೋಷಕರನ್ನು ದಿನನಿತ್ಯ ಪೀಡಿಸಲಾಗುತ್ತಿದೆ. ಸರಕಾರದ ನಿಯಮಗಳ ಬಗ್ಗೆ ಹೇಳಿದರೆ ಕ್ಯಾರೇ ಅನ್ನುತ್ತಿಲ್ಲ. ಜಿಲ್ಲಾ ಶಿಕ್ಷಣ ಅಧಿಕಾರಿಗಳ ಫೋನ್ ಸ್ವೀಕರಿಸದೆ ಅವಮಾನಿಸಿದ್ದಾರೆ. ಆದರೂ ಈ ಶಿಕ್ಷಣ ‌ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ದಮ್ಮೇ ಇಲ್ಲ. ಶಿಕ್ಷಣ ಸಚಿವರ ಸುರೇಶ್ ಕುಮಾರ್ ಅವರ ಬಣ್ಣ ಬಣ್ಣದ ಹೇಳಿಕೆ ಪತ್ರಿಕೆಗಷ್ಟೇ ಸೀಮಿತವಾಗಿದೆ ಎಂದು ಅವರು ದೂರಿದ್ದಾರೆ.

ನಮ್ಮ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ಹೆಸರಲ್ಲಿ ಖಾಸಗೀ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ದಣಿಗಳು ಜನಸಾಮಾನ್ಯರನ್ನು ರಾಜಾರೋಷವಾಗಿ ಸುಲಿಗೆ ಮಾಡುತ್ತಿರುವುದರ ವಿರುದ್ಧ ಸರಕಾರ ಮೌನವಾಗಿದೆಯೆಂದರೆ ಸರಕಾರ ಯಾರ ಪರವಾಗಿದೆಯೆಂಬುದನ್ನು ಇದರಿಂದಲೇ ನಾವು ಕಂಡುಕೊಳ್ಳಬಹುದಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News