ಹೆಬ್ರಿ: ನವೀಕೃತ ನಂದಿನಿ ಪಾರ್ಲರ್ ಉದ್ಘಾಟನೆ
ಹೆಬ್ರಿ, ಜು.23: ರೈತರು ನೀಡುವ ಹಾಲನ್ನು ಶೀತಲೀಕರಿಸಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ನಂದಿನಿ ಪಾರ್ಲರ್ ಮೂಲಕ ನೀಡಲು ಸಾಧ್ಯವಾಗುತ್ತಿದೆ. ಈ ಮೂಲಕ ನಂದಿನಿ ಪಾರ್ಲರ್ ಜನತೆಗೆ ಉತ್ತಮ ಸೇವೆ ನೀಡುತ್ತಿದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಹೇಳಿದ್ದಾರೆ.
ಹೆಬ್ರಿಯಲ್ಲಿ ನವೀಕರಣಗೊಂಡ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಪಾರ್ಲರ್‌ನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು.
ಹೆಬ್ರಿಯಲ್ಲಿ ನಂದಿನಿ ಪಾರ್ಲರ್ ಸ್ಥಾಪನೆಗೆ ಕಾರಣರಾದ ಒಕ್ಕೂಟದ ಮಾಜಿ ನಿರ್ದೇಶಕ ಹಾಗೂ ಸಹಕಾರಿ ಧುರೀಣ ನೀರೆ ಕೃಷ್ಣ ಶೆಟ್ಟಿ ಹಾಗೂ ಪಾರ್ಲರ್‌ನ ಮಾಲಕ ಹೆಬ್ರಿ ಚಂದ್ರಕಾಂತ ನಾಯಕ್ ಇವರ ಸೇವೆಯನ್ನು ಸ್ಮರಿಸಿದ ಹೆಗ್ಡೆ, ಒಕ್ಕೂಟವು ಈಗ ಗ್ರಾಹಕರ ಬೇಡಿಕೆಗಳಿಗೆ ತಕ್ಕ ಉತ್ಪನ್ನಗಳನ್ನು ನಂದಿನಿ ಬ್ರಾಂಡ್ ಮೂಲಕ ಪೂರೈಸುತ್ತಿದೆ ಎಂದರು.
ರೈತರ ಒಕ್ಕೂಟದ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಸಂಸ್ಥೆ ಇದ್ದರೆ ಅದು ಹಾಲು ಒಕ್ಕೂಟ ಮಾತ್ರ. ಕೊರೋನಾ ಮಹಾಮಾರಿಯ ಆತಂಕ, ನಷ್ಟದ ಭೀತಿಯ ನಡವೆಯೂ ನಮಗೆ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಮಾಜಿ ನಿರ್ದೇಶಕ ನೀರೆ ಕೃಷ್ಣ ಶೆಟ್ಟಿ ಹಾಗೂ ಚಂದ್ರಕಾಂತ ನಾಯಕ್ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವೀರ ಯೋಧ ಹೆಬ್ರಿ ನಾಡ್ಪಾಲಿನ ಉದಯ ಪೂಜಾರಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದ.ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್‌ಚಂದ್ರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ ಜಿ.ವಿ.ಹೆಗ್ಡೆ, ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್, ಸ್ಮಿತಾ ಆರ್. ಶೆಟ್ಟಿ, ಹೆಬ್ರಿ ತಹಶೀಲ್ದಾರ್ ಕೆ.ಮಹೇಶ್ಚಂದ್ರ, ಹೆಬ್ರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಾಧು ಹಗ್ಡೆ ಮುಂತಾದವರು ಉಪಸ್ಥಿತರಿದ್ದರು.