×
Ad

ಎಒಟಿ ಫಿಶ್‌ಮಿಲ್‌ನ ವಲಸೆ ಕಾರ್ಮಿಕರಿಗೆ ಅನ್ಯಾಯ ಪ್ರಕರಣ ಸುಖಾಂತ್ಯ

Update: 2020-07-23 18:10 IST

ಮಂಗಳೂರು, ಜು.23: ಎಸ್‌ಇಝೆಡ್ ವ್ಯಾಪ್ತಿಯ ಎಒಟಿ ಫಿಶ್‌ಮಿಲ್ ನಲ್ಲಿ ಅಸ್ಸಾಂ ಮೂಲದ ವಲಸೆ ಕಾರ್ಮಿಕರಿಗೆ ಸಂಬಳ ನೀಡದೆ ಗುತ್ತಿಗೆದಾರ ವಂಚಿಸಿದ ಪ್ರಕರಣವು ಒಂದು ಹಂತದ ಸುಖಾಂತ್ಯ ಕಂಡಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುತ್ತಿಗೆದಾರನಿಂದ ಸಂಬಳ ನೀಡದಿರುವುದು, ಕನಿಷ್ಟ ಕೂಲಿ, ಪಿಎಫ್, ಇಎಸ್‌ಐ ಇಲ್ಲದಿರುವುದನ್ನು ಬಲವಾಗಿ ವಿರೋಧಿಸಿ ಮತ್ತು ನಿಯಮಗಳನ್ನು ಪಾಲಿಸುವಂತೆ ಒತ್ತಾಯಿಸಲಾಗಿತ್ತು ಮತ್ತು ಸ್ಥಳೀಯರಿಗೆ ಆದ್ಯತೆಯಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿದ್ದೆವು. ಅದರಂತೆ ಎಸ್‌ಇಝೆಡ್ ಜನರಲ್ ಮ್ಯಾನೇಜರ್ ಹಿಟಾ ಶ್ರೀನಿವಾಸ ರಾಜು ಮಧ್ಯಸ್ಥಿಕೆಯಲ್ಲಿ ಮೂರು ದಿನಗಳ ಹಿಂದೆ ನಡೆದ ಮಾತುಕತೆಯಲ್ಲಿ ಎಒಟಿ ಸ್ಥಳೀಯ ಪಾಲುದಾರರು ಕಾರ್ಮಿಕರಿಗಾಗಿ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ಮಾತುಕತೆಯ ಫಲವಾಗಿ 15 ಕಾರ್ಮಿಕರಿಗೆ ಗುತ್ತಿಗೆದಾರ ವಂಚಿಸಿರುವ 2 ತಿಂಗಳ ಬಾಕಿ ವೇತನ 16 ಸಾವಿರ ರೂ. ಪಾವತಿಸಲು ಕಂಪೆನಿಯ ಪಾಲುದಾರರು ಒಪ್ಪಿಕೊಂಡರು. ಅಲ್ಲದೆ ಸಂಬಳದಲ್ಲಿ ಹೆಚ್ಚಳ, ಪಿಎಫ್, ಇಎಸ್‌ಐ ಸೌಲಭ್ಯಗಳನ್ನು ಗುತ್ತಿಗೆದಾರರು ಕಡ್ಡಾಯವಾಗಿ ನೀಡುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಈಗ ಉದ್ಯೋಗವಿಲ್ಲದೆ ಕಂಪೆನಿಯ ವಸತಿಯಲ್ಲಿ ಬಾಕಿಯಾಗಿರುವ 15 ವಲಸೆ ಕಾರ್ಮಿಕರನ್ನು ಮೀನುಗಾರಿಕೆ ಆರಂಭಗೊಳ್ಳುತ್ತಲೆ, ಗುತ್ತಿಗೆದಾರರ ಮೂಲಕ ಕೆಲಸಕ್ಕೆ ಮರು ನೇಮಕ ಮಾಡಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ಮಾತುಕತೆಯಲ್ಲಿ ನೀಡಿದ ಭರವಸೆಯಂತೆ ಗುರುವಾರ 15 ಕಾರ್ಮಿಕರನ್ನು ಕಂಪೆನಿಗೆ ಕರೆಯಿಸಿ ತಲಾ 16 ಸಾವಿರ ರೂ.ನಂತೆ ಎರಡು ತಿಂಗಳ ಬಾಕಿ ವೇತನವನ್ನು ಕಂಪೆನಿಯ ಆಡಳಿತ ಪಾವತಿ ಮಾಡಿತು.

ಮಾತುಕತೆ ಸಂದರ್ಭ ಕಂಪೆನಿಯ ಸ್ಥಳೀಯ ಪಾಲುದಾರರಾದ ಅಶ್ರಫ್, ಆನಂದ ಸುವರ್ಣ, ಇರ್ಫಾನ್ ಹಾಗೂ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ ಎಸ್‌ಇಝೆಡ್ ಜನರಲ್ ಮ್ಯಾನೇಜರ್ ಹಿಟಾ ಶ್ರೀನಿವಾಸ ರಾಜು, ಸಿಇಒ ಸೂರ್ಯನಾರಾಯಣ ಹಾಗೂ ಸಂಬಳ ಸಿಗದೆ ಕಂಗೆಟ್ಟಿದ್ದ ವಲಸೆ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಕಲ್ಪಿಸಿ ನ್ಯಾಯಕೊಡಿಸಲು ನಿರಂತರ ಹೋರಾಟ ನಡೆಸಿದ್ದ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ಅಬೂಬಕ್ಕರ್ ಬಾವ, ಇಕ್ಬಾಲ್, ರಾಜು ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News