ದ.ಕ. ಜಿಲ್ಲೆಯಲ್ಲಿ ಕೋವಿಡ್ ಗೆ ಮತ್ತೆ 7 ಮಂದಿ ಬಲಿ
ಮಂಗಳೂರು, ಜು.23: ದ.ಕ.ಜಿಲ್ಲೆಯ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟವರ ಪೈಕಿ 7 ಮಂದಿಯಲ್ಲಿ ಗುರುವಾರ ಕೊರೋನ ಪಾಸಿಟಿವ್ ಕಂಡು ಬಂದಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಕ್ಕೆ 99 ಮಂದಿ ಬಲಿಯಾದಂತಾಗಿದೆ. 7 ಮಂದಿಯ ಪೈಕಿ 6 ಪುರುಷರು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ.
ದಾವಣಗೆರೆಯ 36 ವರ್ಷದ ಯುವಕ, ಭಟ್ಕಳದ 62 ವರ್ಷದ ಪುರುಷ, ಕೇರಳ ಪಾಲಕ್ಕಾಡ್‌ನ 52 ವರ್ಷದ ಪುರುಷ, ಮಂಗಳೂರಿನ 83 ಮತ್ತು 73 ವರ್ಷದ ವೃದ್ಧ, ಬಂಟ್ವಾಳದ 52 ವರ್ಷದ ಪುರುಷ ಮತ್ತು ಮಂಗಳೂರಿನ 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
218 ಪಾಸಿಟಿವ್ ಪ್ರಕರಣ: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 4,000ದ ಗಡಿ ದಾಟಿದೆ. ಅಂದರೆ ಗುರುವಾರ 218 ಮಂದಿಗೆ ಪಾಸಿಟಿವ್ ಕಂಡು ಬರುವುದರೊಂದಿಗೆ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 4,214 ಮಂದಿಗೆ ಕೊರೋನ ಪಾಸಿಟಿವ್ ವರದಿಯಾಗಿದೆ. ಮಾರ್ಚ್‌ನಲ್ಲಿ ಒಂದಕ್ಕಿಯಲ್ಲಿದ್ದ ಸೋಂಕಿತರ ಸಂಖ್ಯೆಯು ಜುಲೈ ಮೊದಲ ವಾರದಲ್ಲಿ ಎರಡಂಕಿ ದಾಟಿ, ಮೂರನೇ ವಾರಕ್ಕೆ ಸೋಂಕಿತರ ಸಂಖ್ಯೆಯು ಮೂರಂಕಿ ತಲುಪಿದೆ. ಮಂಗಳವಾರ 149 ಮತ್ತು ಬುಧವಾರ 162 ಹೊಸ ಪ್ರಕರಣಗಳು ಕಂಡು ಬಂದಿದ್ದರೆ, ಗುರುವಾರ 218 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ.
ಜಿಲ್ಲೆಯಲ್ಲಿ ಗುರುವಾರ ದೃಢಗೊಂಡ 218 ಮಂದಿ ಸೋಂಕಿತರಲ್ಲಿ ಶೀತ ಲಕ್ಷಣ ಹೊಂದಿರುವವರು, ತೀವ್ರ ಉಸಿರಾಟ, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಕೂಡ ಸೇರಿದ್ದಾರೆ. ಇನ್ನು 57 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಎಲ್ಲರನ್ನೂ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
118 ಮಂದಿ ಗುಣಮುಖ: ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್-19ಗೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಗುಣಮುಖರಾಗಿರುವ 118 ಮಂದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ 1,862 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದಂತಾಗಿದೆ. ಆದಾಗ್ಯೂ ಜಿಲ್ಲೆಯಲ್ಲಿ ಇನ್ನೂ 2,258 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಹಲವರು ವೆಂಟಿಲೇಟರ್ ಚಿಕಿತ್ಸೆ ಮತ್ತು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 31,068 ಮಂದಿಯ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದೆ. ಈ ಪೈಕಿ 26,854 ಮಂದಿಯ ವರದಿ ನೆಗೆಟಿವ್ ಬಂದಿದೆ.