×
Ad

ಹಿಲಿಯಾಣ: ರಾಜಕಾರಣಿಯ ಗನ್‌ಮ್ಯಾನ್ ಕುಟುಂಬದ 8 ಮಂದಿಗೆ ಕೊರೋನ ಪಾಸಿಟಿವ್

Update: 2020-07-23 20:42 IST

ಉಡುಪಿ, ಜು.23: ನಾಡಿನ ಹಿರಿಯ ರಾಜಕಾರಣಿಯೊಬ್ಬರ ಗನ್‌ಮ್ಯಾನ್ ಸೇರಿದಂತೆ ಅವರ ಇಡೀ ಕುಟುಂಬದ ಎಂಟು ಮಂದಿ ಇಂದು ಉಡುಪಿ ಜಿಲ್ಲೆಯಲ್ಲಿ ಕೊರೋನಕ್ಕೆ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

ಕೋಟ ಹೋಬಳಿಯ ಹಿಲಿಯಾಣದಲ್ಲಿ ವಾಸವಾಗಿರುವ ಈ ಕುಟುಂಬದ ಎಂಟು ಮಂದಿಯಲ್ಲೂ ಸೋಂಕು ಪತ್ತೆಯಾಗಿದೆ. ಶೀತಜ್ವರಕ್ಕಾಗಿ ಗನ್‌ಮ್ಯಾನ್ ಅವರನ್ನು ಮೊದಲು ಪರೀಕ್ಷೆಗೊಳಪಡಿಸಿದ ಬಳಿಕ ಮನೆಯವರ ಮಾದರಿಗಳನ್ನು ಸಂಗ್ರಹಿಸಿದ್ದು, ಎಲ್ಲರದ್ದೂ ಪಾಸಿಟಿವ್ ಬಂದಿದೆ. ಒಂಟಿಯಾಗಿರುವ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಕೋಟ ಕಂದಾಯ ನಿರೀಕ್ಷಕ ರಾಜು ತಿಳಿಸಿದ್ದಾರೆ.

ಅದೇ ರೀತಿ ಇಂದು ವಡ್ಡರ್ಸೆಯಲ್ಲಿ ಒಂದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರದಲ್ಲಿ ಉದ್ಯೋಗದಲ್ಲಿದ್ದ ಪುರುಷರೊಬ್ಬರು ವಡ್ಡರ್ಸೆಯ ಪತ್ನಿ ಮನೆಗೆ ಬಂದಿದ್ದಾಗ ಅವರ ಮಾದರಿ ಫಲಿತಾಂಶ ಪಾಸಿಟಿವ್ ಆಗಿ ಬಂದಿತ್ತು. ಇದರಿಂದ ಮನೆಯವರನ್ನು ಸೋಂಕಿನ ಪರೀಕ್ಷೆಗೊಳಪಡಿಸಿ, ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದರು.

ಇಬ್ಬರು ನರ್ಸ್ ಪಾಸಿಟಿವ್: ಬ್ರಹ್ಮಾವರದಲ್ಲಿ ಇಬ್ಬರು ನರ್ಸ್ ಪಾಸಿಟಿವ್ ಬಂದಿದ್ದಾರೆ. ಚಾಂತಾರಿನಲ್ಲಿರುವ ಮಣಿಪಾಲ ಕೆಎಂಸಿಯ 54 ವರ್ಷದ ನರ್ಸ್ ಹಾಗೂ ಉಪ್ಪೂರಿನಲ್ಲಿ ವಾಸವಾಗಿರುವ ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ 23 ವರ್ಷ ಪ್ರಾಯದ ನರ್ಸ್‌ಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಇವರಿಬ್ಬರ ಮನೆಯ ಆಸುಪಾಸಿನ ಐದು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಹಂದಾಡಿ 18 ಮನೆ ಸೀಲ್‌ಡೌನ್: ಹಂದಾಡಿಯಲ್ಲಿ 41 ವರ್ಷ ಪ್ರಾಯದ ಮಂಗಳೂರಿನಲ್ಲಿ ಬ್ಯಾಂಕ್ ನೌಕರಿಯಲ್ಲಿರುವ ವ್ಯಕ್ತಿಯಲ್ಲಿ ಪಾಸಿಟಿವ್ ಕಾಣಿಸಿದ್ದು, ಅವರು ವಾಸವಾಗಿರುವ ವಸತಿ ಸಂಕೀರ್ಣದ ಮೂರು ಮಹಡಿಗಳ ಒಟ್ಟು 18 ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ವಾರಂಬಳ್ಳಿ ಮೂಡಗರಡಿಯ 67ರ ಹರೆಯದ ವೃದ್ಧರಲ್ಲಿ ಪಾಸಿಟಿವ್ ಇದ್ದು, ಎರಡು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದರು.

ಉಡುಪಿ-16: ಉಡುಪಿ ತಾಲೂಕಿನಲ್ಲಿ ಕೊಡವೂರು-3, 76 ಬಡಗುಬೆಟ್ಟು-2, ಶಿವಳ್ಳಿ-3, ಆತ್ರಾಡಿ-2, ತೆಂಕನಿಡಿಯೂರು-3, ಮೂಡು ನಿಡಂಬೂರು -3 ಸೇರಿದಂತೆ ಒಟ್ಟು 16 ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಬೈಂದೂರು ತಾಲೂಕಿನಲ್ಲಿ ನಾವುಂದ-1, ಬಿಜೂರು-2, ಯಡ್ತರೆ-3, ಮರವಂತೆ-1, ಉಪ್ಪುಂದ-1 ಸೇರಿ ಒಟ್ಟು ಎಂಟು ಮಂದಿ ಪಾಸಿಟಿವ್ ಆಗಿದ್ದಾರೆ.

ಕುಂದಾಪುರ-8: ಕುಂದಾಪುರ ತಾಲೂಕಿನಲ್ಲಿ ವಂಡ್ಸೆ-3, ಆಜ್ರಿ-2, ಕುಂದಾಪುರ ನಗರ-2, ಗಂಗೊಳ್ಳಿ-1 ಸೇರಿ ಒಟ್ಟು ಎಂಟು ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News