ಯುಪಿಸಿಎಲ್ ಹೆಸರಲ್ಲಿ ನಕಲಿ ವೆಬ್‌ಸೈಟ್: ದೂರು
ಉಡುಪಿ, ಜು.23: ಪಡುಬಿದ್ರಿ ಕಾರ್ಯಾಚರಿಸುತ್ತಿರುವ ಉಡುಪಿ ಪವರ್ ಕಾರ್ಪೋರೇಷನ್ ಲಿ. (ಯುಪಿಸಿಎಲ್) ಕಂಪೆನಿಯ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಆಕರ್ಷಕ ಸಂಬಳದ ಉದ್ಯೋಗಕ್ಕೆ ಅರ್ಜಿಗಳನ್ನು ಆಹ್ವಾನಿಸಿ ಜನರಿಂದ ಆನ್‌ಲೈನ್‌ನಲ್ಲಿ ಹಣವನ್ನು ಸಂಗ್ರಹಿಸುತ್ತಿರುವ ಬಗ್ಗೆ ಕಂಪೆನಿಯ ಅಸೋಶಿಯೇಟ್ ಜನರಲ್ ಮ್ಯಾನೇಜರ್ ಕೆ.ಶಶಿಧರ್ ಎಂಬವರು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಂಪೆನಿಯ ಅಧಿಕೃತ ವೆಬ್‌ಸೈಟ್- www.adanipower.com- ಆಗಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು - www.udupipowerproject.com www.upclindia.com, www.udupiproject.com, https://www.udupiproject.in - ಹೆಸರಿನಲ್ಲಿ ಕಂಪೆನಿಯ ನಕಲಿ ನೇಮಕಾತಿ ವೆಬ್‌ಸೈಟ್ ಸೃಷ್ಟಿಸಿ ಅದರಲ್ಲಿ ಯುಪಿಸಿಎಲ್‌ನ 80,000ರೂ. ತಿಂಗಳ ಸಂಬಳದ 1800 ಇಂಜಿನಿಯರಿಂಗ್ ಖಾಲಿಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಪ್ರತಿ ಅರ್ಜಿಯೊಂದಿಗೆ 500ರೂ. ಆನ್‌ಲೈನ್‌ನಲ್ಲಿ ಶುಲ್ಕ ನೀಡುವಂತೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ಹೆಲ್ಫ್‌ಲೈನ್ ಎಂದು ಮೊಬೈಲ್ ಸಂಖ್ಯೆಯನ್ನು ನಮೂದಿಸಲಾಗಿದೆ. ಇವು ಯಾವುದೂ ನಮ್ಮ ಕಂಪೆನಿಯ ವೆಬ್‌ಸೈಟ್‌ಗಳಲ್ಲ. ಯಾರೋ ಅಪರಿಚಿತ ವ್ಯಕ್ತಿಗಳು ಕಂಪೆನಿಯ ಹೆಸರು ಹಾಳು ಮಾಡುವ ಉದ್ದೇಶದಿಂದ ಸೃಷ್ಟಿಸಿರುವ ನಕಲಿ ವೆಬ್‌ಸೈಟ್ ಹಾಗೂ ನಕಲಿ ಮೇಲ್ ಐಡಿಗಳಾಗಿವೆ. ಇವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ವಿನಂತಿಸಲಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಐಟಿ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ.