ಮುಲ್ಕಿ: ವಾರಸುದಾರರಿದ್ದರೂ ಅನಾಥರಾಗಿ ಮೃತಪಟ್ಟ ವೇಣುಗೋಪಾಲ ರಾವ್‌ರ ಅಂತ್ಯಕ್ರಿಯೆ ನೆರವೇರಿಸಿದ ಆಪತ್ಬಾಂಧವ ಆಸಿಫ್
ಮುಲ್ಕಿ, ಜು.23: ವಾರಸುದಾರರಿದ್ದರೂ ಅನಾಥರಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಕಾರ್ನಾಡುವಿನ ಮೈಮೂನಾ ಫೌಂಡೇಶನ್‌ನ ನಿರ್ದೇಶಕ ಆಪತ್ಬಾಂಧವ ಆಸಿಫ್ ಮಾದರಿಯಾಗಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆ ಬ್ರಹ್ಮಸ್ತಾನ ಬಳಿಯ ನಿವಾಸಿ ವೇಣುಗೋಪಾಲ ರಾವ್(62) ಗುರುವಾರ ಮುಲ್ಕಿಯ ಕಾರ್ನಾಡಿನಲ್ಲಿ ಆಸಿಫ್ ನಡೆಸುತ್ತಿರುವ ಅನಾಥಾಶ್ರಮದಲ್ಲಿ ಮೃತಪಟ್ಟಿದ್ದಾರೆ. ಇವರಿಗೆ ವಾರಸುದಾರರಿದ್ದರೂ ಅಂತ್ಯ ಸಂಸ್ಕಾರಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಆಪದ್ಭಾಂದವ ಆಸಿಫ್ ಮುಲ್ಕಿಯ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಿದರು.
ವೇಣುಗೋಪಾಲ ರಾವ್ ನಾಲ್ಕು ವರ್ಷಗಳ ಹಿಂದೆ ಮಾನಸಿಕವಾಗಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪಡುಬಿದ್ರೆ ದೇವಸ್ಥಾನದ ಬಳಿ ಪತ್ತೆಯಾಗಿದ್ದರು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಆಪತ್ಬಾಂಧವ ಆಸಿಫ್ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಅವರು ಸ್ವಲ್ಪಮಟ್ಟಗೆ ಗುಣಮುಖರಾದ ಹಿನ್ನೆಲೆಯಲ್ಲಿ ಮನೆಗೆ ಕರೆದೊಯ್ಯುವಂತೆ ವೇಣುಗೋಪಾಲರಾವ್‌ರ ಸಂಬಂಧಿಕರನ್ನು ಸಂಪರ್ಕಿಸಿ ಆಸಿಫ್ ತಿಳಿಸಿದ್ದರು. ಆದರೆ ಇದಕ್ಕೆ ಸಂಬಂಧಿಕರಿಂದ ಸೂಕ್ತ ಸ್ಪಂದನೆ ಲಭಿಸಿದ ಕಾರಣ ಆಸೀಫ್ ಮುಲ್ಕಿಯ ಕಾರ್ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ತಮ್ಮ ಅನಾಥಾಶ್ರಮದಲ್ಲಿ ಅವರಿಗೆ ಆಶ್ರಯ ಕಲ್ಪಿಸಿದ್ದರು.
ಈ ನಡುವೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೇಣುಗೋಪಾಲ ರಾವ್ ತಮ್ಮ ಮನೆಯವರನ್ನು ಆಗಾಗ್ಗೆ ಕೇಳುತ್ತಿದ್ದರು. ಆದರೆ ಅವರ ಮನೆಯವರನ್ನು ಸಂಪರ್ಕಿಸಿದರೂ ಯಾವುದೇ ಸ್ಪಂದನೆ ದೊರೆಯುತ್ತಿರಲಿಲ್ಲ ಎಂದು ಆಸಿಫ್ ಬೇಸರ ವ್ಯಕ್ತಪಡಿಸಿದ್ದಾರೆ.
‘‘ಅಸ್ವಸ್ಥರಾಗಿದ್ದ ವೇಣುಗೋಪಾಲ ರಾವ್ ಗುರುವಾರ ನಿಧನರಾಗಿದ್ದಾರೆ. ಕೂಡಲೇ ಆಸೀಫ್ ಅವರು ವೇಣುಗೋಪಾಲ ರಾವ್‌ರ ಸಂಬಂಧಿಕರಾದ ಪಡುಬಿದ್ರೆಯ ಸುಬ್ರಹ್ಮಣ್ಯ ರಾವ್ ಎಂಬವರನ್ನು ಸಂಪರ್ಕಿಸಿ ಮಾಹಿತಿ ನೀಡಿ ಈ ಸಂಬಂಧ ಮುಲ್ಕಿ ಠಾಣೆಗೆ ಬರುವಂತೆ ತಿಳಿಸಿದ್ದರು. ಆಸಿಫ್‌ರ ಒತ್ತಾಯದ ಮೇರೆಗೆ ಮುಲ್ಕಿ ಠಾಣೆಗೆ ಆಗಮಿಸಿದ ಸುಬ್ರಹ್ಮಣ್ಯ ರಾವ್ ಮುಲ್ಕಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಪೊಲೀಸರ ಸಮ್ಮುಖದಲ್ಲಿ ಅನುಮತಿ ನೀಡಿ ಅದಕ್ಕೆ ತಗಲುವ ವೆಚ್ಚದ ಹಣ ನೀಡಿ ಹೋದರು. ಈ ನಡುವೆ ವೇಣುಗೋಪಾಲ ರಾವ್‌ರ ತಮ್ಮನನ್ನು ಸಂಪರ್ಕಿಸಿದಾಗ ಅವರು ಸಕರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಆಸಿಫ್ ತಿಳಿಸಿದ್ದಾರೆ.
ಈ ರೀತಿ ವಾರಸುದಾರರಿದ್ದರೂ ಅನಾಥರಾದ ವೇಣುಗೋಪಾಲ ರಾವ್‌ರ ಅಂತ್ಯ ಸಂಸ್ಕಾರ ನೆರವೇರಿಸುವ ಜವಾಬ್ದಾರಿಯನ್ನು ಆಪತ್ಬಾಂಧವ ಆಸಿಫ್ ವಹಿಸಿದರು. ಮುಲ್ಕಿಯ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನೆರೇವೇರಿಸಿದರು.
ಈ ಸಂದರ್ಭ ಮುಲ್ಕಿ ನಪಂ ಸಿಬ್ಬಂದಿ ಕಿಶೋರ್ ಶೆಟ್ಟಿ, ಆಪತ್ಬಾಂಧವ ಆಶ್ರಮದ ಸಿಬ್ಬಂದಿ ದಾವೂದ್ ಹಾಗೂ ದಿನೇಶ್, ವಿಶ್ವನಾಥ ಪೂಜಾರಿ, ಅಫ್ತಾಬ್ ಮತ್ತಿತರರು ಆಸಿಫ್‌ರಿಗೆ ಸಹಕರಿಸಿದರು.