ಉಡುಪಿ: ಶನಿವಾರ ಕೋವಿಡ್‌ಗೆ ಒಟ್ಟು ಮೂರು ಸಾವು
ಉಡುಪಿ, ಜು.25:ಶ್ವಾಸಕೋಶದ ಕ್ಯಾನ್ಸರ್‌ಗಾಗಿ ಚಿಕಿತ್ಸೆಯಲ್ಲಿದ್ದು ಕೋವಿಡ್‌ಗೆ ಪಾಸಿಟಿವ್ ಬಂದಿದ್ದ ವ್ಯಕ್ತಿಯೊಬ್ಬರು ಶನಿವಾರ ಬೆಳಗ್ಗೆ ಉಡುಪಿಯ ಡಾ.ಟಿಎಂ ಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲೆಯ ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಕೊಲ್ಲೂರಿನ 45ರ ಹರೆಯದ ಈ ವ್ಯಕ್ತಿ ವಾರದ ಹಿಂದೆ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲಕ್ಕೆ ದಾಖಲಾಗಿದ್ದು, ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಾಗ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬೆಳಗ್ಗೆ ಮೃತಪಟ್ಟರೆಂದು ತಿಳಿಸಿದರು. ಮೃತವ್ಯಕ್ತಿಯ ಅಂತ್ಯಕ್ರಿಯೆ ಇಂದು ಕೊಲ್ಲೂರಿನಲ್ಲಿ ಕೋವಿಡ್-19 ಮಾರ್ಗಸೂಚಿಯಂತೆ ನಡೆಯಿತು ಎಂದು ತಿಳಿದುಬಂದಿದೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 15 ಮಂದಿ ಮೃತಪಟ್ಟಂತಾಗಿದೆ.
ಅಲ್ಲದೇ ಮಣಿಪಾಲದ ಕೆಎಂಸಿಯಲ್ಲಿ ಇಂದು ಹೊರ ಜಿಲ್ಲೆಗಳ ಇಬ್ಬರು ಕೊರೋನ ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರು ಶಿವಮೊಗ್ಗ ಜಿಲ್ಲೆಯವರಾದರೆ, ಇನ್ನೊಬ್ಬರು ಉತ್ತರ ಕನ್ನಡ ಜಿಲ್ಲೆಯವರು. ಇಬ್ಬರೂ ಅನ್ಯ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತಿದ್ದು, ಕೊರೋನ ಪಾಸಿಟಿವ್ ಪತ್ತೆಯಾದ ಬಳಿಕ ಮೃತಪಟ್ಟಿದ್ದರು.
ಶ್ವಾಸಕೋಶ ಹಾಗೂ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದ ಶಿವಮೊಗ್ಗದ 75ರ ಹರೆಯದ ಮಹಿಳೆಯಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅದೇ ರೀತಿ ಉತ್ತರ ಕನ್ನಡದ ವ್ಯಕ್ತಿ ಸಹ ಅನ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತಿದ್ದು, ಪರೀಕ್ಷೆ ವೇಳೆ ಇವರಲ್ಲೂ ಕೊರೋನ ಸೋಂಕು ಪತ್ತೆಯಾಗಿತ್ತು. ಅವರು ಇಂದು ಬೆಳಗ್ಗೆ ಮೃತಪಟ್ಟರೆಂದು ಡಿಎಚ್‌ಓ ತಿಳಿಸಿದರು.