ರಾಜಸ್ಥಾನ: ಬಿಜೆಪಿ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2020-07-25 16:26 GMT

ಜೈಪುರ, ಜು. 25: ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರವನ್ನು ಉರುಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ರಾಜಸ್ಥಾನದ ಹಲವು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಪಿತೂರಿ ನಡೆಸುತ್ತಿರುವ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುವಂತೆ ಹಾಗೂ ವಿಧಾನ ಸಭೆ ಅಧಿವೇಶನ ಏರ್ಪಡಿಸಲು ಆಗ್ರಹಿಸುವಂತೆ ಕಾಂಗ್ರೆಸ್ ತನ್ನ ಎಲ್ಲ ಜಿಲ್ಲೆಗಳ ಕೇಂದ್ರ ಕಚೇರಿಗೆ ಶುಕ್ರವಾರ ಕರೆ ನೀಡಿತ್ತು. ಜೈಪುರದಲ್ಲಿ ಯುವ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಪಕ್ಷದ ನಾಯಕರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.

‘‘ಬಿಜೆಪಿಯ ಉದ್ದೇಶ ಈಡೇರದು. ಅಶೋಕ್ ಗೆಹ್ಲೋಟ್ ಅವರ ಸರಕಾರ ತನ್ನ ಅಧಿಕಾರದ ಅವಧಿ ಪೂರ್ಣಗೊಳಿಸಲಿದೆ. ರಾಜ್ಯಪಾಲರು ವಿಧಾನ ಸಭೆ ಅಧಿವೇಶನ ಕರೆಯದಿರುವುದು ನಿರಾಶೆ ಉಂಟು ಮಾಡಿದೆ. ಅಧಿವೇಶನ ಕರೆಯಬೇಕು’’ ಎಂದು ಬಿಕೇನರ್‌ನಲ್ಲಿ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಕೋಟಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರ್ಯಾಲಿ ನಡೆಸಿದರು. ಜೋಧಪುರದಲ್ಲಿ ಧರಣಿ ನಡೆಸಿದರು. ಅದೇ ರೀತಿ ರಾಜ್ಯದ ಇತರ ಕಡೆಗಳಲ್ಲೂ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸುವಂತೆ ಶುಕ್ರವಾರ ಕರೆ ನೀಡಿದ್ದ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್, ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಸಂದರ್ಭ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದರು. ಯಾವುದೇ ಸ್ಥಳದಲ್ಲಿ 50ಕ್ಕಿಂತ ಹೆಚ್ಚು ಜನರು ಸೇರಬೇಡಿ ಎಂದು ಅವರು ಹೇಳಿದ್ದರು. ಆದರೆ, ಎಲ್ಲ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸುರಕ್ಷಿತ ಅಂತರ ಕಾಯು್ದಕೊಳ್ಳದೆ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News