ವರವರ ರಾವ್ ಆರೋಗ್ಯ ಸ್ಥಿತಿಯ ಮಾಹಿತಿ ನೀಡಲು ನಿರ್ದೇಶಿಸುವಂತೆ ಕೋರಿ ಎನ್‌ಎಚ್‌ಆರ್‌ಸಿಗೆ ಕುಟುಂಬದ ಪತ್ರ

Update: 2020-07-25 16:31 GMT

ಹೈದರಾಬಾದ್, ಜು. 25: ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ವರವರ ರಾವ್ ಅವರ ಆರೋಗ್ಯದ ಬಗೆಗಿನ ಪಾರದರ್ಶಕ ಮಾಹಿತಿ ಒದಗಿಸಲು ಮುಂಬೈ ಆಸ್ಪತ್ರೆಗೆ ಹಾಗೂ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ವರವರ ರಾವ್ ಅವರ ಕುಟುಂಬದ ಸದಸ್ಯರು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ವರವರ ರಾವ್ ಅವರಿಗೆ ನೀಡುತ್ತಿರುವ ಚಿಕಿತ್ಸೆ ಅಥವಾ ಅವರ ಪರಿಸ್ಥಿತಿ ಬಗೆಗಿನ ಯಾವುದೇ ಮಾಹಿತಿಯನ್ನು ನೀಡಲು ನಾನಾವತಿ ಆಸ್ಪತ್ರೆ ನಿರಾಕರಿಸುತ್ತಿದೆ. ಅವರನ್ನು ಕೆಲವು ದಿನಗಳ ಹಿಂದೆ ತಲೋಜ ಕಾರಾಗೃಹದಿಂದ ಸಂತ ಜಾರ್ಜ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿಂದ ನಾನಾವತಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅವರಿಗೆ ಕೊರೋನ ಸೋಂಕು ದೃಢ ಪಟ್ಟಿದೆ ಎಂಬುದು ಮಾತ್ರ ಕುಟುಂಬಕ್ಕೆ ನೀಡಲಾದ ಅಧಿಕೃತ ಮಾಹಿತಿ. ಬೇರೆ ಯಾವುದೇ ಮಾಹಿತಿ ದೊರೆತಿಲ್ಲ. ಆದುದರಿಂದ ನಾವು ಈ ಮನವಿ ಸಲ್ಲಿಸಿದ್ದೇವೆ ಎಂದು ಕುಟುಂಬದ ಸದಸ್ಯರು ಮನವಿಯಲ್ಲಿ ಹೇಳಿದ್ದಾರೆ.

ವರವರ ರಾವ್ ಅವರಿಗೆ ನೀಡಲಾಗುತ್ತಿರುವ ಎಲ್ಲ ವೈದ್ಯಕೀಯ ಸೇವೆ ಹಾಗೂ ನೆರವಿನ ಬಗ್ಗೆ ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಜುಲೈ 13ರಂದು ಆದೇಶ ನೀಡಿದೆ. ಆದರೆ, ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡದೆ ಈ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯೆಪ್ರವೇಶಿಸುವಂತೆ ಆಗ್ರಹಿಸಿರುವ ಕುಟುಂಬ, ಪ್ರತಿ ಆರು ಗಂಟೆಗಳಿಗೆ ಒಮ್ಮೆ ಅವರ ಆರೋಗ್ಯ ಹಾಗೂ ಅವರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಬೇಕು ಎಂದು ಕೋರಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವರವರ ರಾವ್ ಅವರನ್ನು ಜುಲೈ 16ರಂದು ಮುಂಬೈಯ ನಾನಾವತಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News