ಮಲಬಾರ್ ನೌಕಾಭ್ಯಾಸದಲ್ಲಿ ಆಸ್ಟ್ರೇಲಿಯ ಪಾಲ್ಗೊಂಡರೆ ಬಲವರ್ಧನೆ: ಅಮೆರಿಕ

Update: 2020-07-25 17:14 GMT

ವಾಶಿಂಗ್ಟನ್, ಜು. 25: ಮುಂದಿನ ಮಲಬಾರ್ ನೌಕಾಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ಆಸ್ಟ್ರೇಲಿಯಕ್ಕೆ ಆಹ್ವಾನ ನೀಡಲು ಭಾರತ ಪರಿಶೀಲನೆ ನಡೆಸುತ್ತಿರುವಂತೆಯೇ, ನೌಕಾಭ್ಯಾಸದಲ್ಲಿ ಈಗಾಗಲೇ ಪಾಲ್ಗೊಳ್ಳುತ್ತಿರುವ ಮೂರು ದೇಶಗಳ ಜೊತೆಗೆ ಆಸ್ಟ್ರೇಲಿಯವೂ ಕೈಜೋಡಿಸಿದರೆ ಪರಸ್ಪರರ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಾದ ಶಕ್ತಿಯನ್ನು ಬಲಪಡಿಸಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಸ್ಟೀವನ್ ಬೀಗನ್ ಹೇಳಿದ್ದಾರೆ.

ಅಮೆರಿಕದ ಚೀನಾ ನೀತಿಯ ಬಗ್ಗೆ ಸೆನೆಟ್ ವಿದೇಶ ಸಂಬಂಧಗಳ ಸದಸ್ಯರ ಸಮ್ಮುಖದಲ್ಲಿ ನಡೆದ ವಿಚಾರಣೆಯ ವೇಳೆ ಅವರು ಈ ಹೇಳಿಕೆ ನೀಡಿದರು.

ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳು ಪಾಲ್ಗೊಳ್ಳುವ ವಾರ್ಷಿಕ ನೌಕಾಭ್ಯಾಸದ ಮುಂದಿನ ಆವೃತ್ತಿಯಲ್ಲಿ ಪಾಲ್ಗೊಳ್ಳುವಂತೆ ಆಸ್ಟ್ರೇಲಿಯಕ್ಕೆ ಆಹ್ವಾನ ನೀಡುವ ಬಗ್ಗೆ ಭಾರತ ಪರಿಶೀಲಿಸುತ್ತಿದೆ. ಮಲಬಾರ್ ನೌಕಾಭ್ಯಾಸದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯದ ಆಸಕ್ತಿಯನ್ನು ಭಾರತ ಧನಾತ್ಮಕವಾಗಿ ಪರಿಶೀಲಿಸುತ್ತಿದೆ ಹಾಗೂ ಈ ಕುರಿತ ಔಪಚಾರಿಕ ನಿರ್ಧಾರವನ್ನು ಇನ್ನೆರಡು ವಾರಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

‘‘ಮಲಬಾರ್ ನೌಕಾಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ಭಾರತ ಇತ್ತೀಚೆಗೆ ಆಸ್ಟ್ರೇಲಿಯಕ್ಕೆ ಆಹ್ವಾನ ನೀಡಿದೆ. ಇದು ನಮ್ಮ ಪರಸ್ಪರ ಹಿತಾಸಕ್ತಿಗಳ ರಕ್ಷಣೆಗೆ ಅಗತ್ಯವಾದ ಶಕ್ತಿಯನ್ನು ಬಲಪಡಿಸುತ್ತದೆ’’ ಎಂದು ಬೀಗನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News