ಶಸ್ತ್ರಸಜ್ಜಿತ ಡ್ರೋನ್‌ಗಳ ರಫ್ತು ಮೇಲಿನ ನಿರ್ಬಂಧ ಸಡಿಲಿಸಿದ ಟ್ರಂಪ್

Update: 2020-07-25 17:17 GMT

ವಾಶಿಂಗ್ಟನ್, ಜು. 25: ಶಸ್ತ್ರಸಜ್ಜಿತ ಡ್ರೋನ್‌ಗಳ ರಫ್ತುಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು ಸಡಿಲಿಸುವ ನಿಟ್ಟಿನಲ್ಲಿ ಅಮೆರಿಕದ ಟ್ರಂಪ್ ಆಡಳಿತ ಶುಕ್ರವಾರ ಕ್ರಮಗಳನ್ನು ತೆಗೆದುಕೊಂಡಿದೆ. ಮಿತ್ರ ದೇಶಗಳಿಗೆ ಅಮೆರಿಕದ ತಂತ್ರಜ್ಞಾನದ ಅಗತ್ಯವಿದೆ ಹಾಗೂ ಪರಮಾಣು ಪ್ರಸರಣ ನಿಷೇಧ ಒಪ್ಪಂದದ ವ್ಯಾಪ್ತಿಯಿಂದ ಹೊರಗಿರುವ ದೇಶಗಳು ಈ ಎಲ್ಲ ತಂತ್ರಜ್ಞಾನಗಳನ್ನು ಹೊಂದಿವೆ ಎಂದು ಅದು ಹೇಳಿದೆ.

1987ರ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಪ್ಪಂದದಿಂದ ಆಂಶಿಕವಾಗಿ ಹೊರಬರುವ ಪ್ರಸ್ತಾವವೊಂದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ. ಈ ಒಪ್ಪಂದದಡಿ ಮಾನವರಹಿತ ಶಸ್ತ್ರಾಸ್ತ್ರ ಸಾಗಾಟ ಉಪಕರಣಗಳ ಮಾರಾಟವನ್ನು ನಿರ್ಬಂಧಿಸಲು 35 ದೇಶಗಳು ಒಪ್ಪಿಕೊಂಡಿದ್ದವು.

ಪರಮಾಣು ಶಸ್ತ್ರಗಳಂಥ ದೊಡ್ಡ ಗಾತ್ರದ ಶಸ್ತ್ರಗಳನ್ನು ಸಾಗಿಸಬಲ್ಲ ಕ್ಷಿಪಣಿಗಳ ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ಈ ಒಪ್ಪಂದವನ್ನು ರೂಪಿಸಲಾಗಿತ್ತು. ಆದರೆ, ಈಗಿನಂತೆ ಶಸ್ತ್ರಾಸ್ತ್ರ ಸಂಘರ್ಷದಲ್ಲಿ ಪ್ರಮುಖ ಪಾತ್ರವನ್ನು ವಹಿಸದ ಸಮಯದಲ್ಲೂ ಡ್ರೋನನ್ನು ಈ ಒಪ್ಪಂದದ ವ್ಯಾಪ್ತಿಗೆ ತರಲಾಗಿತ್ತು.

ಅಮೆರಿಕದ ಹೊಸ ನಿರ್ಧಾರದಂತೆ, ಗಂಟೆಗೆ 800 ಕಿ.ಮೀ.ಗೂ ಕಡಿಮೆ ವೇಗದ ಡ್ರೋನ್‌ಗಳನ್ನು ಈಗ ಅಮೆರಿಕ ಮಾರಾಟ ಮಾಡಬಹುದಾಗಿದೆ. ಇದರ ಪ್ರಕಾರ, ಅಮೆರಿಕ ಸೇನೆ ಬಳಸುತ್ತಿರುವ ರೀಪರ್ ಮತ್ತು ಪ್ರಡೇಟರ್ ಡ್ರೋನ್‌ಗಳು ಹಾಗೂ ಅಮೆರಿಕದ ರಕ್ಷಣಾ ಉತ್ಪಾದಕರು ಉತ್ಪಾದಿಸುತ್ತಿರುವ ಇತರ ಡ್ರೋನ್‌ಗಳನ್ನು ಅಮೆರಿಕ ಇನ್ನು ಮಾರಾಟ ಮಾಡಬಹುದಾಗಿದೆ.

‘‘ಈ ಒಪ್ಪಂದದ ಮಾನದಂಡಗಳು ಮೂರು ದಶಕಗಳಷ್ಟು ಹಳೆಯದು’’ ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News