ಆನ್‌ಲೈನ್‌ನಲ್ಲಿ ಕಲಿಕೆಗಾಗಿ ಬರುವ ವಿದ್ಯಾರ್ಥಿಗಳನ್ನು ಸ್ವೀಕರಿಸುವುದಿಲ್ಲ: ಅಮೆರಿಕ ಘೋಷಣೆ

Update: 2020-07-25 17:20 GMT

ವಾಶಿಂಗ್ಟನ್, ಜು. 25: ಆನ್‌ಲೈನ್‌ನಲ್ಲಿ ಮಾತ್ರ ಅಧ್ಯಯನ ಮಾಡುವುದಕ್ಕಾಗಿ ಹೊಸದಾಗಿ ಅಮೆರಿಕಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳನ್ನು ಸ್ವೀಕರಿಸುವುದಿಲ್ಲ ಎಂದು ಅಮೆರಿಕ ಶುಕ್ರವಾರ ಘೋಷಿಸಿದೆ.

ಈಗಾಗಲೇ ಅಮೆರಿಕದಲ್ಲಿರುವ ಹಾಗೂ ಆನ್‌ಲೈನ್ ಕಲಿಕೆಗೆ ತಯಾರಾಗುತ್ತಿರುವ ವಿದೇಶಿ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವ ಉದ್ದೇಶದ ವಿವಾದಾಸ್ಪದ ಆದೇಶವೊಂದನ್ನು ಹಿಂದಕ್ಕೆ ಪಡೆದ ಬಳಿಕ ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಮೆರಿಕದ ಹೆಚ್ಚಿನ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಆನ್‌ಲೈನ್‌ನಲ್ಲೇ ಶಿಕ್ಷಣ ನೀಡುತ್ತಿವೆ.

ವಲಸೆ ಮತ್ತು ಸುಂಕ ಅನುಷ್ಠಾನ ಇಲಾಖೆಯು ಹೇಳಿಕೆಯೊಂದರಲ್ಲಿ ನಿಯಮದಲ್ಲಾಗಿರುವ ಬದಲಾವಣೆಯನ್ನು ಪ್ರಕಟಿಸಿದೆ.

ತನ್ನ ಪ್ರಮುಖ ಚುನಾವಣಾ ಆಶ್ವಾಸನೆಯಾಗಿರುವ ವಲಸೆಯನ್ನು ನಿರ್ಬಂಧಿಸುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಸ್ಥಳೀಯರಿಗೆ ಉದ್ಯೋಗಗಳನ್ನು ದೊರಕಿಸಿಕೊಡುವುದಕ್ಕಾಗಿ ಟ್ರಂಪ್ ಈಗಾಗಲೇ ಹಲವು ಉದ್ಯೋಗ ವೀಸಾಗಳನ್ನು ಈ ವರ್ಷದ ಕೊನೆಯವರೆಗೆ ಸ್ಥಗಿತಗೊಳಿಸಿದ್ದಾರೆ.

2018-19ರ ಶೈಕ್ಷಣಿಕ ವರ್ಷದಲ್ಲಿ ಅಮೆರಿಕದಲ್ಲಿ 10 ಲಕ್ಷಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳಿದ್ದರು ಎಂದು ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಎಜುಕೇಶನ್ ತಿಳಿಸಿದೆ. ಹೆಚ್ಚಿನ ಶಾಲೆಗಳು ಈ ವಿದ್ಯಾರ್ಥಿಗಳ ಬೋಧಕ ಶುಲ್ಕವನ್ನೇ ಹೆಚ್ಚಾಗಿ ಅವಲಂಬಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News