ಮುಂಬೈ ದಾಳಿ ಪಿತೂರಿಗಾರನಿಗೆ ಜಾಮೀನು ನಿರಾಕರಿಸಿದ ಅಮೆರಿಕ ನ್ಯಾಯಾಲಯ

Update: 2020-07-25 17:35 GMT

ವಾಶಿಂಗ್ಟನ್, ಜು. 25: 2008ರ ಮುಂಬೈ ಭಯೋತ್ಪಾದಕ ದಾಳಿಯ ಪಿತೂರಿಗಾರರ ಪೈಕಿ ಒಬ್ಬನಾಗಿರುವ, ಪಾಕಿಸ್ತಾನ ಮೂಲದ ಕೆನಡ ಉದ್ಯಮಿ ತಹವ್ವರ್ ರಾಣಾನ ಜಾಮೀನು ಅರ್ಜಿಯನ್ನು ಅಮೆರಿಕದ ನ್ಯಾಯಾಲಯವೊಂದು ತಿರಸ್ಕರಿಸಿದೆ.

ಜಾಮೀನು ನೀಡಿದರೆ ಈ ಭಯೋತ್ಪಾದಕನು ವಿಮಾನದ ಮೂಲಕ ಹೊರದೇಶಕ್ಕೆ ಪರಾರಿಯಾಗಬಹುದು ಎಂದು ನ್ಯಾಯಾಲಯ ಹೇಳಿದೆ.

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿರುವ ತಹವ್ವರ್ ರಾಣಾನನ್ನು ಗಡಿಪಾರು ಮಾಡಬೇಕೆಂದು ಕೋರಿ ಭಾರತ ಸಲ್ಲಿಸಿರುವ ಮನಿವಿಯ ಮೇರೆಗೆ ಆತನನ್ನು ಲಾಸ್ ಏಂಜಲಿಸ್‌ನಲ್ಲಿ ಜೂನ್ 10ರಂದು ಮರುಬಂಧಿಸಲಾಗಿತ್ತು. ಅವನು ಮುಂಬೈ ದಾಳಿಯ ರೂವಾರಿ ಡೇವಿಡ್ ಕೋಲ್‌ಮನ್ ಹೆಡ್ಲಿಯ ಬಾಲ್ಯ ಗೆಳೆಯನಾಗಿದ್ದ. ಮುಂಬೈ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ರಾಣಾನನ್ನು ದೇಶಭ್ರಷ್ಟ ಎಂಬುದಾಗಿ ಘೋಷಿಸಲಾಗಿದೆ.

ಲಾಸ್ ಏಂಜಲಿಸ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಜಾಕಲಿನ್ ಚೂಲ್‌ಜಿಯನ್ ತನ್ನ ಜುಲೈ 21ರ 24 ಪುಟಗಳ ಆದೇಶದಲ್ಲಿ ರಾಣಾನಿಗೆ ಜಾಮೀನು ನಿರಾಕರಿಸಿದ್ದಾರೆ. ಜಾಮೀನು ನೀಡಿದರೆ ಅವನು ಅಮೆರಿಕದಿಂದ ಪರಾರಿಯಾಗಬಹುದು ಎಂದು ನ್ಯಾಯಾಧೀಶೆ ಹೇಳಿದ್ದಾರೆ.

ಇದೇ ನೆಲೆಯಲ್ಲಿ, ಅವನಿಗೆ ಜಾಮೀನು ನೀಡುವುದನ್ನು ಅಮೆರಿಕ ಸರಕಾರವು ವಿರೋಧಿಸಿತ್ತು. ಅವನು ಕೆನಡಕ್ಕೆ ಪರಾರಿಯಾದರೆ, ಭಾರತದಲ್ಲಿ ಅವನಿಗೆ ನೀಡಬಹುದಾದ ಸಂಭಾವ್ಯ ಮರಣ ದಂಡನೆಯಿಂದ ಪಾರಾಗಬಹುದು ಎಂದು ಅದು ವಾದಿಸಿತ್ತು.

‘‘ಈಗಿನ ಪರಿಸ್ಥಿತಿಯಲ್ಲಿ, ರಾಣಾನಿಗೆ ಜಾಮೀನು ನೀಡಿದರೆ ಅವನು ಮುಂದೆ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇಲ್ಲ. ಅವನಿಗೆ ಜಾಮೀನು ನೀಡಿದರೆ ಅಮೆರಿಕವು ತನ್ನ ವಿದೇಶ ನೀತಿಯಲ್ಲಿ ಮುಜುಗರಕ್ಕೆ ಒಳಗಾಗಬಹುದು ಹಾಗೂ ಭಾರತದೊಂದಿಗಿನ ಅದರ ಸಂಬಂಧವು ಹದಗೆಡಬಹುದು’’ ಎಂದು ಅಮೆರಿಕದ ಸಹಾಯಕ ಅಟಾರ್ನಿ ಜಾನ್ ಜೆ. ಲೂಲ್‌ಜಿಯಾನ್ ನ್ಯಾಯಾಲಯದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News