ಕೋವಿಡ್-19 ಪರೀಕ್ಷೆಯಲ್ಲಿ ಸೌರವ್ ಗಂಗುಲಿ ನೆಗೆಟಿವ್
Update: 2020-07-26 11:11 IST
ಕೋಲ್ಕತಾ, ಜು.26: ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅವರ ಸಹೋದರ ಸ್ನೇಹಶೀಶ್ ಗಂಗುಲಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗಂಗುಲಿ ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ಸಮಯದಿಂದ ಹೋಂ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಗಂಗುಲಿ ಅವರ ಕೊರೋನ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.
ಗಂಗುಲಿ ಅವರು ಅನಾರೋಗ್ಯ ಪೀಡಿತ ತಾಯಿ ಹಾಗೂ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಪ್ರೇರಿತರಾಗಿ ಕೊರೋನ ಪರೀಕ್ಷೆಗೆ ಒಳಗಾಗಿದ್ದರು. ಶುಕ್ರವಾರ ಸಂಜೆ ಬಂದಿರುವ ವರದಿಯಲ್ಲಿ ಸೋಂಕು ತಗಲದೆ ಇರುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ. ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಸ್ನೇಹಶೀಶ್ ಇದೀಗ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.