ಕೋವಿಡ್-19ನಿಂದ ಶತಾಯುಷಿ ವೃದ್ಧೆ ಚೇತರಿಕೆ
ಹೈದರಾಬಾದ್, ಜು.26: ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 101 ವಯಸ್ಸಿನ ವೃದ್ದೆಯೊಬ್ಬರು ಕೋವಿಡ್-19 ನಿಂದ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಹಿಳೆಯ ಮಾನಸಿಕ ಸ್ಥೈರ್ಯವೇ ಕೊರೋನ ವಿರುದ್ಧ ಜಯಿಸಲು ಕಾರಣ ಎಂದು ಆಸ್ಪತ್ರೆಯವರು ಹೇಳಿದ್ದಾರೆ.
ವೃದ್ಧೆ ಪಿ. ಮಂಗಮ್ಮ ಸಾಧಾರಣ ಕೊರೋನ ವೈರಸ್ ಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜು.14ರಂದು ಆಸ್ಪತ್ರೆಗೆ ದಾಖಲಾಗುವಾಗ ಕಫ ಎಂದು ಹೇಳಿದ್ದರು. ವೃದ್ದೆಯ ಕುಟುಂಬ ಸದಸ್ಯರಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, ಯಾರಿಗೂ ಸೋಂಕು ತಗಲಿರುವುದು ಕಂಡುಬಂದಿಲ್ಲ. ವೃದ್ದೆಯನ್ನು ಆಸ್ಪತ್ರೆಯ ಕೋವಿಡ್ ಕೇರ್‌ನ ಜನರಲ್ ಐಸೊಲೇಶನ್ ವಾರ್ಡ್‌ಗೆ ದಾಖಲಿಸಿಕೊಳ್ಳಲಾಗಿತ್ತು ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಆರ್. ರಾಮ್ ಹೇಳಿದರು.
ಮಹಿಳೆಯ ವಯಸ್ಸು ತಿಳಿದುಕೊಂಡ ಬಳಿಕ ಅವರ ಸಹಾಯಕ್ಕೆ ಓರ್ವ ಆರೋಗ್ಯ ಕಾರ್ಯಕರ್ತೆಯನ್ನ್ನು ನೇಮಿಸಿದ್ದೆವು. ಆರೋಗ್ಯ ಕಾರ್ಯಕರ್ತೆ ಮಂಜುಳಾ ಅವರು ಮಂಗಮ್ಮರಲ್ಲದೆ, ಇತರ ಇಬ್ಬರು ರೋಗಿಗಳನ್ನು ನೋಡಿಕೊಳ್ಳಬೇಕಾಗಿತ್ತು. ಆದರೆ ಇದಕ್ಕೆ ಮಂಗಮ್ಮ ಸಂಪೂರ್ಣ ಸಹಕಾರ ನೀಡಿದ್ದು,ಒಂದು ದಿನವೂ ದೂರು ನೀಡಿಲ್ಲ ಎಂದು ರಾಮ್ ಹೇಳಿದರು.